ರಾಜೀವ್ ಹಂತಕನಿಗೆ 26 ವರ್ಷದ ಬಳಿಕ ಪೆರೋಲ್
ಚೆನ್ನೈ, ಆಗಸ್ಟ್. 24 : ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬರಾದ ಪೆರಾರಿವಾಲನ್ ಗೆ ತಮಿಳುನಾಡು ಸರ್ಕಾರ ಪೆರೋಲ್ ಮಂಜೂರು ಮಾಡಿದೆ. ಇಪ್ಪತಾರು ವರ್ಷಗಳ ಬಳಿಕ ಮೊದಲ ಬಾರಿಗೆ 30 ದಿನಗಳ ಕಾಲ ಪೆರೋಲ್ ನೀಡಲಾಗಿದೆ.

ಪೆರಾರಿವಾಲನ್ ವೆಲ್ಲೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತಂದೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಅವರಿಗೆ ಮೂವತ್ತು ದಿನಗಳ ಕಾಲ ಪೆರೋಲ್ ಮಂಜೂರು ಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಪೆರಾರಿವಾಲನ್ ತಾಯಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ಮಗನಿಗೆ ಪೆರೋಲ್ ನೀಡುವಂತೆ ಮನವಿ ಮಾಡಿದ್ದರು. ಹಾಸಿಗೆ ಹಿಡಿದಿರುವ ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿದ್ದರು.
ಸಾಕಷ್ಟು ಬಾರಿ ಮನವಿ ಮಾಡಿದ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಒಂದು ತಿಂಗಳ ಕಾಲ ಪೆರೋಲ್ ನೀಡಿದೆ. ಇಪ್ಪತ್ತಾರು ವರ್ಷಗಳ ಬಳಿಕ ಪೆರಾರಿವಾಲನ್ ಪೆರೋಲ್ ಮೇಲೆ ಹೊರಬರುತ್ತಿದ್ದಾರೆ.
ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಪೆರಾರಿವಾಲನ್‌ಗೆ ಪೆರೋಲ್ ನೀಡಬೇಕು ಎಂದು ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದರು.
2014ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜೆಯಲಲಿತಾ ಅವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸುಪ್ರೀಂಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.












Click it and Unblock the Notifications