ಉಭಯ ರಾಜ್ಯಗಳ ಹೃದಯ ಸಾಗಣೆ ಸಾಹಸ ಯಶಸ್ವಿ
ಚೆನ್ನೈ, ಸೆ.4 : ಬೆಂಗಳೂರಿನಿಂದ ಜೀವಂತವಾಗಿ ತೆಗೆದುಕೊಂಡು ಹೋಗಿದ್ದ ಹೃದಯವನ್ನು ಯುವಕನಿಗೆ ಅಳವಡಿಸುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಮಹಿಳೆಯ ಹೃದಯವನ್ನು ಚೆನ್ನೈಗೆ ಬುಧವಾರ ಮಧ್ಯಾಹ್ನ ತಗೆದುಕೊಂಡು ಬರಲಾಗಿತ್ತು.
ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ 32 ವರ್ಷದ ಮಹಿಳೆಯ ಜೀವಂತ ಹೃದಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸಾಗಿಸಿ ರೋಗಿಯೊಬ್ಬರಿಗೆ ಜೋಡಿಸುವಲ್ಲಿ ಉಭಯ ರಾಜ್ಯಗಳ ಖಾಸಗಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
ಬಿಜಿಎಸ್ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಜೀವಂತ ಹೃದಯವನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ಸಾಗಿಸಲಾಯಿತು. ಚೆನ್ನೈ ವಿಮಾನ ನಿಲ್ದಾಣದಿಂದ ಪೋರ್ಟಿಸ್ ಆಸ್ಪತ್ರೆಗೆ ಹೃದಯವನ್ನು ಸಾಗಿಸಿ, ಅಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ಆಳವಡಿಸಿ, ಹೃದಯಕ್ಕೆ ಜೀವ ತುಂಬಲಾಗಿದೆ.

ಆಂಬ್ಯುಲೆನ್ಸ್‌ನಲ್ಲಿ ಹೃದಯವನ್ನು ಸಾಗಿಸಲು ಬೆಂಗಳೂರಿನ ಟ್ರಾಫಿಕ್ ಪೊಲೀಸರು ತಡೆರಹಿತ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟರು. ಅದೇ ರೀತಿ ಚೆನ್ನೈನ ಟ್ರಾಫಿಕ್ ಪೊಲೀಸರೂ ಸಹಕಾರ ಕೊಟ್ಟರು. ಎರಡೂ ರಾಜ್ಯಗಳ ವೈದ್ಯರ ನಡುವೆ ಸಮನ್ವಯ ಮತ್ತು ಪೊಲೀಸರ ಸಹಕಾರಿಂದ ವ್ಯಕ್ತಿಯೊಬ್ಬರು ಮರುಜೀವ ಪಡೆದಿದ್ದಾರೆ. [ಹೃದಯ ಸಾಗಣೆ ಹೇಗೆ ನಡೆಯಿತು ಗೊತ್ತಾ?]
ಬೆಂಗಳೂರಿನಿಂದ ಬಂದ ಹೃದಯ ಚೆನ್ನೈನ ಪೋರ್ಟಿಸ್ ಆಸ್ಪತ್ರೆಯನ್ನು ಸಂಜೆ 4.45ಕ್ಕೆ ತಲುಪಿತು. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಡಾ.ಕೆ.ಆರ್.ಬಾಲಕೃಷ್ಣನ್ ನೇತೃತ್ವದ ಎಂಟು ಮಂದಿಯ ವೈದ್ಯರ ತಂಡ ಹೃದಯ ಕಸಿ ಶಸ್ತ್ರಚಿಕಿತ್ಸೆ ಆರಂಭಿಸಿತು. ಸತತ ಐದು ತಾಸುಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ರಾತ್ರಿ 9 ಗಂಟೆಗೆ ತಿಳಿಸಿದರು. ಈ ವೈದ್ಯರ ತಂಡಕ್ಕೆ ಬೆಂಗಳೂರಿನಿಂದ ತೆರಳಿದ್ದ ಡಾ.ಸುರೇಶ್ ರಾವ್ ನೆರವು ನೀಡಿದರು.
ಹೃದಯ ಮಾತ್ರ ನೀಡಿಲ್ಲ ಮಹಿಳೆ : ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೇವಲ ಹೃದಯವನ್ನು ಮಾತ್ರ ನೀಡಿಲ್ಲ. ಎರಡು ಮೂತ್ರ ಪಿಂಡ, ಎರಡು ಕಣ್ಣು ಹಾಗೂ ಯಕೃತ್ (ಲಿವರ್) ಕೂಡ ದಾನ ಮಾಡಿದ್ದು, ಒಟ್ಟು ಆರು ಅಂಗಾಗಳನ್ನು ದಾನ ಮಾಡಿದ್ದಾರೆ. ಹೃದಯವನ್ನು ಚೆನ್ನೈನ ಪುರುಷ ರೋಗಿಯೊಬ್ಬರಿಗೆ ದಾನ ಮಾಡಿದರೆ, ಉಳಿದ ಅಂಗಾಂಗಗಳನ್ನು ಬೆಂಗಳೂರಿನ ನಾನಾ ಖಾಸಗಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಜೋಡಣೆ ಮಾಡಲಾಗಿದೆ. [ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]
ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ : ಅಂಗಾಗಳನ್ನು ದಾನ ಮಾಡಿದ ಮಹಿಳೆ ತಮಿಳುನಾಡಿನ ಹೊಸೂರಿನಲ್ಲಿ ಆ.30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. 32 ವರ್ಷ ವಯಸ್ಸಿನ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ರಕ್ತಸ್ರಾವವಾಗಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಶಸ್ತ್ರಚಿಕಿತ್ಸೆ ನಡೆಸಿದ್ದರೂ ಗುಣಮುಖರಾಗಿರಲಿಲ್ಲ.
ಆಕೆಯ ಸಂಬಂಧಿಕರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆತಂದರು. ವೈದ್ಯರು ಸತತವಾಗಿ ಪ್ರಯತ್ನ ನಡೆಸಿದರೂ ಮಿದುಳು ಮತ್ತೆ ಕೆಲಸ ಮಾಡದ ಸ್ಥಿತಿ ತಲುಪಿತು. ಮಹಿಳೆ ಪ್ರಜ್ಞಾಹೀನರಾದರು. ಸೆ.2ರಂದು ಮಹಿಳೆ ಮಿದುಳು ಮಾಮೂಲಿನಂತೆ ಆಗುವುದಿಲ್ಲ ಎಂಬುದು ಬಿಜಿಎಸ್ ಆಸ್ಪತ್ರೆ ವೈದ್ಯರಿಗೆ ತಿಳಿದ ನಂತರ, ವ್ಯರ್ಥವಾಗುವ ಅಂಗಾಂಗಗಳನ್ನು ದಾನ ಮಾಡುವ ವಿಚಾರವನ್ನು ಮಹಿಳೆಯ ಕುಟುಂಬದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.












Click it and Unblock the Notifications