ಪತ್ನಿಯನ್ನು ಕೊಂದು ಕತ್ತರಿಸಿ ಕಸದ ತೊಟ್ಟಿಗೆ ಎಸೆದ ಸಿನಿಮಾ ನಿರ್ದೇಶಕ ಬಂಧನ
ಚೆನ್ನೈ, ಫೆಬ್ರವರಿ 7: ಪತ್ನಿಯನ್ನು ಅಮಾನುಷವಾಗಿ ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಸದ ತೊಟ್ಟಿಗಳಲ್ಲಿ ಎಸೆದಿದ್ದ ತಮಿಳು ಸಿನಿಮಾ ನಿರ್ದೇಶಕ ಬಾಲಕೃಷ್ಣನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ನಗರದ ಕಸದ ವಿಲೇವಾರಿ ಘಟಕದಲ್ಲಿ ಮಹಿಳೆಯ ರುಂಡವಿಲ್ಲದ ದೇಹದ ವಿವಿಧ ಭಾಗಗಳು ಕಳೆದ ತಿಂಗಳು ಪತ್ತೆಯಾಗಿದ್ದವು. ಕತ್ತರಿಸಿ ಹಾಕಿದ್ದ ಕೈಗಳಲ್ಲಿ ಕಂಡುಬಂದಿದ್ದ ಎರಡು ಟ್ಯಾಟೂಗಳು ಅದು 37 ವರ್ಷದ ಸಂಧ್ಯಾ ಅವರ ದೇಹ ಎಂದು ಗುರುತು ಹಚ್ಚಲು ನೆರವಾಗಿದ್ದವು.
ಶಿವ-ಪಾರ್ವತಿ ಮತ್ತು ಡ್ರ್ಯಾಗನ್ ಚಿತ್ರವಿದ್ದ ಟ್ಯಾಟೂಗಳನ್ನು ಸುಳಿವನ್ನಾಗಿ ಬಳಸಿಕೊಂಡಿದ್ದ ಪೊಲೀಸರು ಪತ್ನಿಯನ್ನು ಕೊಂದಿದ್ದ ಬಾಲಕೃಷ್ಣನ್‌ನನ್ನು ಎರಡು ವಾರಗಳ ಬಳಿಕ ಬಂಧಿಸಿದ್ದಾರೆ. ಸಂಧ್ಯಾ ಅವರ ಕೈಯಲ್ಲಿದ್ದ ಒಂದು ಬಳೆ ಕೂಡ ತನಿಖೆಗೆ ನೆರವು ನೀಡಿತ್ತು.

ಬಾಲಕೃಷ್ಣನ್ (51) ಜನವರಿ 19ರಂದು ಪತ್ನಿಯನ್ನು ಕೊಲೆ ಮಾಡಿದ್ದ. ಮರುದಿನ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಚೆನ್ನೈ ನಗರದ ವಿವಿಧೆಡೆ ಕಸದ ತೊಟ್ಟಿಗಳಲ್ಲಿ ಎಸೆದಿದ್ದ.
ಟ್ಯಾಟೂಗಳು ಮತ್ತು ಬಳೆಯ ಚಿತ್ರವನ್ನು ಎಲ್ಲೆಡೆ ಪ್ರಕಟಿಸಲಾಗಿತ್ತು. ಇದನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ಸಂಧ್ಯಾ ಅವರ ತಾಯಿ ಗುರುತಿಸಿದ್ದರು. ಸಂಧ್ಯಾ ತೂತುಕುಡಿಗೆ ಮರಳಿದ್ದು, ಫೋನ್‌ಗೆ ಸಿಗುತ್ತಿಲ್ಲ ಎಂದು ಬಾಲಕೃಷ್ಣನ್ ಕುಟುಂಬಕ್ಕೆ ತಿಳಿಸಿದ್ದ.
ಬಾಲಕೃಷ್ಣನ್ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಬಂಧಿಸಿದರು. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಆಧಾರದಲ್ಲಿ ಹುಡುಕಾಟ ನಡೆಸಿದಾಗ ದೇಹದ ಮತ್ತೊಂದು ಅಂಗವೊಂದು ಪತ್ತೆಯಾಗಿದೆ. ಆದರೆ, ಇನ್ನೂ ತಲೆ ಪತ್ತೆಯಾಗಿಲ್ಲ.
ತೂತುಕುಡಿಯ ಬಾಲಕೃಷ್ಣನ್ ಮತ್ತು ಸಂಧ್ಯಾ 2000ನೇ ಇಸವಿಯಲ್ಲಿ ಮದುವೆಯಾಗಿದ್ದರು. ಸಂಧ್ಯಾ ಅವರು ಬಾಲಕೃಷ್ಣನ್‌ಗಿಂತ 14 ವರ್ಷ ಚಿಕ್ಕವರು. ಹಿಂದಿನಿಂದಲೂ ಇಬ್ಬರ ನಡುವೆ ಸಂಬಂಧದಲ್ಲಿ ಸಮಸ್ಯೆ ತಲೆದೋರಿತ್ತು. ಕಳೆದ ವರ್ಷ ಮನೆಯಿಂದ ಹೊರಬಂದಿದ್ದ ಸಂಧ್ಯಾ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆಪ್ತ ಸಮಾಲೋಚನೆ ನಡೆಸಿದ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದರು.
'ಕಾದಲ್ ಇಳವಾಸಂ' ಎಂಬ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದ ಬಾಲಕೃಷ್ಣನ್, ಮತ್ತೊಂದು ಸಿನಿಮಾ ಮಾಡಲು ಭಾರಿ ಮೊತ್ತದ ಹಣ ನೀಡುವಂತೆ ಪತ್ನಿ ಕುಟುಂಬವನ್ನು ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ.












Click it and Unblock the Notifications