Breaking; ಮದ್ರಾಸ್ ಐಐಟಿಯಲ್ಲಿ ಮತ್ತೆ 18 ಮಂದಿಗೆ ಕೋವಿಡ್
ಚೆನ್ನೈ, ಏಪ್ರಿಲ್ 22; ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಮತ್ತೆ 18 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಎರಡು ದಿನದಲ್ಲಿ 30 ಪ್ರಕರಣಗಳು ದಾಖಲಾಗಿವೆ.
ಗುರುವಾರ ಐಐಟಿ ಕ್ಯಾಂಪಸ್‌ನಲ್ಲಿ 12 ಜನರಿಗೆ ಸೋಂಕು ತಗುಲಿತ್ತು. ಶುಕ್ರವಾರ ಮತ್ತೆ 18 ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಂಕು ತಗುಲಿದ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳುನಾಡಿನ ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಗುರುವಾರ ಸಂಜೆ ಐಐಟಿ ಮದ್ರಾಸ್ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು. ಕ್ಯಾಂಪಸ್ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿದ್ದರು.
ಏಪ್ರಿಲ್ 20ರ ಹೆಲ್ತ್ ಬುಲೆಟಿನ್ ಪ್ರಕಾರ ತಮಿಳುನಾಡು ರಾಜ್ಯದಲ್ಲಿ 39 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 34,53,390ಕ್ಕೆ ಏರಿಕೆಯಾಗಿತ್ತು.
ಹೊಸ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಆರೋಗ್ಯ ಇಲಾಖೆ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದೆ. ಪ್ರತಿದಿನ 25 ಸಾವಿರ ಮಾದರಿಗಳ ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.
ಚೆನ್ನೈ ನಗರದಲ್ಲಿ ಕಳೆದ ಹಲವು ದಿನಗಳಿಂದ ಹೊಸ ಕೋವಿಡ್ ಪ್ರಕರಗಳ ಸಂಖ್ಯೆ 20ರ ಗಡಿ ದಾಟಿಲ್ಲ. ಚೆಂಘಲ್ ಪೇಟ್, ವೆಲ್ಲೂರು, ತಾಂಜಾವೂರು, ಕಾಚೀಪುರಂ, ತಿರುವಳ್ಳೂರು ಮುಂತಾದ ಕಡೆ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿಲ್ಲ.
ಶುಕ್ರವಾರದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 2,451 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 14,241ಕ್ಕೆ ಏರಿಕೆಯಾಗಿದೆ.












Click it and Unblock the Notifications