ಪಂಜಾಬ್: ಎಎಪಿಯೊಂದಿಗೆ ಮೈತ್ರಿ ತಳ್ಳಿಹಾಕಿದ ಸಂಯುಕ್ತ ಸಮಾಜ ಮೋರ್ಚಾ
ಚಂಡೀಗಢ, ಜನವರಿ 10: ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿರುವ ಸಂಯುಕ್ತ ಸಮಾಜ ಮೋರ್ಚಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್, ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಯ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಹಾಗೆಯೇ ಒಂದು ವಾರದೊಳಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಹೇಳಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಒಂದು ವರ್ಷಗಳ ಕಾಲ ಹಲವಾರು ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಿದ ಬಳಿಕ, ಪಂಜಾಬ್‌ನಲ್ಲಿ ಹಲವಾರು ಪಂಜಾಬ್ ರೈತ ಸಂಘಟನೆಗಳು ರಾಜಕೀಯ ರಂಗವನ್ನು ರಚನೆ ಮಾಡಿದೆ. ಹಾಗೆಯೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿಯೂ ಹೇಳಿದೆ. ಭಾನುವಾರ, ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಪ್ರತಿನಿಧಿಗಳು ಚುನಾವಣೆ ಎದುರಿಸಲು ಸಂಯುಕ್ತ ಸಂಘರ್ಷ್ ಪಕ್ಷವನ್ನು ರಚಿಸಿದ ರೈತ ಮುಖಂಡ ಗುರ್ನಾಮ್ ಸಿಂಗ್ ಚದುನಿರನ್ನು ಭೇಟಿ ಆಗಿದ್ದಾರೆ.
ಈ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡುವ ಎಸ್‌ಎಸ್‌ಎಂ, "ಆಮ್ ಆದ್ಮಿ ಪಕ್ಷದೊಂದಿಗೆ (ಎಎಪಿ) ಮೋರ್ಚಾ ಮೈತ್ರಿ ಮಾಡಿಕೊಳ್ಳುವುದಿಲ್ಲ," ಎಂದು ಹೇಳಿದೆ. ಹಾಗೆಯೇ ಎಸ್‌ಎಸ್‌ಎಂ ವಿಧಾನಭೆ ಚುನಾವಣೆಯಲ್ಲಿ 60 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಆದರೆ ಎಎಪಿ ಕೇವಲ ಹತ್ತರಲ್ಲಿ ಸ್ಫರ್ಧಿಸುವ ಅವಕಾಶ ನೀಡಿದೆ ಎಂಬ ವರದಿಯನ್ನು "ಆಧಾರರಹಿತ" ಎಂದು ಕೂಡಾ ಪಕ್ಷವು ಹೇಳಿದೆ.

ಒಂದು ವಾರದೊಳಗೆ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಇನ್ನು ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಸಮಾಜ ಮೋರ್ಚಾ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್, "ಸಮಯ ಬಂದಾಗ ನಾವು ನೋಡುತ್ತೇವೆ. ಸಂಯುಕ್ತ ಸಮಾಜ ಮೋರ್ಚಾವು ಅಭ್ಯರ್ಥಿಗಳ ಆಯ್ಕೆಗಾಗಿ ಪರಿಶೀಲನಾ ಸಮಿತಿ, ಸಂಸದೀಯ ಮಂಡಳಿ ಮತ್ತು ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಿದೆ. ನಾವು ನಮ್ಮ ಆರಂಭಿಕ ಅರ್ಜಿದಾರರ ಪಟ್ಟಿಯನ್ನು ಎರಡರಿಂದ ಮೂರು ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಎಲ್ಲಾ ಅಭ್ಯರ್ಥಿಗಳನ್ನು ಒಂದು ವಾರದೊಳಗೆ ಬಹಿರಂಗಪಡಿಸಲಾಗುವುದು," ಎಂದು ತಿಳಿಸಿದ್ದಾರೆ.
ಸ್ಪರ್ಧೆಗೆ ಇಳಿಯುವವರು ಎಲ್ಲರೂ ರೈತರೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಲ್ಬೀರ್ ಸಿಂಗ್ ರಾಜೇವಾಲ್, "ಪರಿಶಿಷ್ಟ ಜಾತಿಗಳ ಗುಂಪು ಮತ್ತು ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗಗಳಿಂದ ಜನರು ಸ್ಪರ್ಧೆಗೆ ಇಳಿಯಲಿದ್ದಾರೆ," ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ 2022:
ಮುಂದಿನ ತಿಂಗಳು ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್ ಒಟ್ಟು 117 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು, 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸಿದೆ. ಚುನಾವಣೆ ನಡೆಯಲಿರುವ ಈ ಐದು ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ಇದ್ದು, ಹಲವಾರು ಆತಂರಿಕ ವಿಚಾರಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಆಡಳಿತವನ್ನು ಉಳಿಸಿಕೊಳ್ಳಲಿದೆಯೇ ಎಂಬುವುದು ಕುತೂಹಲದ ವಿಚಾರವಾಗಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 77, ಎಎಪಿ 20, ಎಲ್‌ಐಪಿ 2, ಅಕಾಲಿದಳ 15, ಬಿಜೆಪಿ ಮೂರು ಸ್ಥಾನದಲ್ಲಿ ಗೆಲುವು ಸಾಧಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications