ದೇವಸ್ಥಾನದಲ್ಲಿ ಬಲಿ ಯತ್ನ, ಆರೋಪಿ ಬಂಧನ: ತನಿಖೆಗೆ ಆದೇಶಿಸಿದ ಸಿಎಂ ಚನ್ನಿ
ಚಂಡೀಗಢ, ಜನವರಿ 24: ಸೋಮವಾರ ಪಂಜಾಬ್‌ನ ಪಟಿಯಾಲದಲ್ಲಿರುವ ಐತಿಹಾಸಿಕ ಕಾಳಿ ದೇವಸ್ಥಾನದಲ್ಲಿ ಬಲಿ ನೀಡುವ ಯತ್ನ ನಡೆದಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿರುವುದರಿಂದ ಭಾರೀ ಮಹತ್ವ ಪಡೆದಿದೆ. ಈ ಘಟನೆ ಮಧ್ಯಾಹ್ನ ನಡೆದಿದ್ದು, ಆರೋಪಿಯನ್ನು ರಾಜದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ ಮತ್ತು 354 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ದೇವಾಲಯದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಮುಸುಕುಧಾರಿಯೊಬ್ಬ ಕಾಳಿ ದೇವಿಯ ವಿಗ್ರಹವನ್ನು ಇರಿಸಲಾಗಿರುವ ಆವರಣವನ್ನು ಪರಿಶೀಲನೆ ನಡೆಸಿ ಅಲ್ಲಿ ಬಲಿ ನಡೆಸಲು ಯತ್ನ ಮಾಡಿರುವುದು ಕಂಡು ಬಂದಿದೆ. ಆದರೆ ಆ ವ್ಯಕ್ತಿಯನ್ನು ಪೂಜಾರಿಯವರು ತಕ್ಷಣವೇ ವಿಗ್ರಹದಿಂದ ದೂರ ತಳ್ಳಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. "ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಂಜಾಬ್‌ನಲ್ಲಿ ಕಷ್ಟಪಟ್ಟು ಸ್ಥಾಪನೆ ಮಾಡಿದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಜನರನ್ನು ಒತ್ತಾಯಿಸಿದರು. ರಾಜ್ಯದಾದ್ಯಂತ ಇರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸುವಲ್ಲಿ ಪಂಜಾಬಿಗಳು ಒಗ್ಗಟ್ಟಾಗಿ ಇರುವಂತೆ ಮನವಿ ಮಾಡಿದರು.

ಉನ್ನತ ಮಟ್ಟದ ತನಿಖೆಗೆ ಬಿಜೆಪಿ ಆಗ್ರಹ
ಏತನ್ಮಧ್ಯೆ ಘಟನೆಯನ್ನು ಖಂಡಿಸಿರುವ ಬಿಜೆಪಿ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ. ಎಸ್‌ಎಡಿ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಕೂಡ ಈ ಬಲಿ ಪ್ರಯತ್ನದ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಖ್‌ಬೀರ್ ಸಿಂಗ್ ಬಾದಲ್, "ಪಟಿಯಾಲಾದ ಕಾಳಿ ಮಾತಾ ಮಂದಿರದಲ್ಲಿ ನಡೆದ ದೌರ್ಜನ್ಯವನ್ನು ಬಲವಾಗಿ ಖಂಡಿಸುತ್ತೇನೆ. ಹಿಂದೂಗಳು ಮತ್ತು ಸಿಖ್ ದೇಗುಲಗಳ ನಡುವೆ ಕೋಮು ದ್ವೇಷವನ್ನು ಹರಡಲು ಪಂಜಾಬ್ ಹೊರಗಿನ ಶಕ್ತಿಗಳ ಪಿತೂರಿಯ ಬಗ್ಗೆ ನಾವು ಆತಂಕ ಹೊಂದಿದ್ದೇವೆ. ಈ ಪಿತೂರಿಯ ವಿರುದ್ಧ ಎಚ್ಚರಿಕೆ ನೀಡಿದ್ದೇವೆ. ಕೆಟ್ಟ ಭಯಗಳು ನಿಜವಾಗುತ್ತವೆ. ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕಾಪಾಡಲು ಅವರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಇರೋಣ," ಎಂದು ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿಗೆ ಟ್ಯಾಗ್ ಮಾಡಿರುವ ಅಕಾಲಿದಳ ನಾಯಕ ಸುಖ್‌ಬೀರ್ ಸಿಂಗ್ ಬಾದಲ್, "ಕಾಂಗ್ರೆಸ್ ಆಡಳಿತದಲ್ಲಿ ಪಂಜಾಬ್‌ನಲ್ಲಿ ನಡೆಯುತ್ತಿರುವ ಅಸಂಖ್ಯಾತ ಬಲಿ ಕೃತ್ಯಗಳಲ್ಲಿ ಇದು ಕೇವಲ ಒಂದು. ಈ ಹೇಯ ಕೃತ್ಯಗಳನ್ನು ನೋಡಿದಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾಮರಸ್ಯವನ್ನು ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆಯೇ? ಎಂದು ತೋರುತ್ತದೆ. ಚರಣ್‌ಜೀತ್ ಸಿಂಗ್ ಚನ್ನಿ ಅವರೇ," ಎಂದಿದ್ದಾರೆ. ಪಟಿಯಾಲ ಎಸ್ಪಿ, ಸಿಟಿ, ಹರ್ಪಾಲ್ ಸಿಂಗ್, ಘಟನೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications