ಖಾಲಿಸ್ತಾನ್ ಚಳವಳಿಗೆ ಬೆಂಬಲ ಆರೋಪ: ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ
ಚಂಡೀಗಢ, ಫೆಬ್ರವರಿ 18: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕವಿ ಕುಮಾರ್ ವಿಶ್ವಾಸ್ ಮಾಡಿರುವ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಗುರುವಾರ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಲು ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ. ಪ್ರತ್ಯೇಕತಾವಾದಿ ಅಂಶಗಳ ಬೆಂಬಲವನ್ನು ಪಡೆಯಲು ಕೇಜ್ರಿವಾಲ್ ಸಿದ್ಧರಾಗಿದ್ದರು ಎಂದು ಎಂದು ಎಎಪಿಯ ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸಲು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದಾರೆ.
ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್‌ನಲ್ಲಿ ಇನ್ನು ಎರಡು ದಿನಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದೆಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಆಪ್ ನಾಯಕರೇ ಗಂಭೀರ ಆರೋಪವನ್ನು ಮಾಡಿದ್ದಾರೆ. ಈಗ ಈ ಬಗ್ಗೆ ತನಿಖೆಗೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಆಗ್ರಹ ಮಾಡಿರುವುದು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳೂ ಕೂಡಾ ಇದೆ.

ಕುಮಾರ್ ವಿಶ್ವಾಸ್ ಮಾಡಿದ ಆರೋಪವೇನು?
"ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸುತ್ತಿದ್ದಾರೆ," ಎಂದು ಎಎಪಿ ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ದೂರಿದ್ದಾರೆ. "ಒಂದು ದಿನ, ಅರವಿಂದ್ ಕೇಜ್ರಿವಾಲ್ ಅವರು ಸಿಎಂ (ಪಂಜಾಬ್) ಅಥವಾ ಸ್ವತಂತ್ರ ರಾಷ್ಟ್ರದ (ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು," ಎಂದು ವಿಶ್ವಾಸ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. "ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಗಾದರೂ ಕೂಡಾ ಅಧಿಕಾರವನ್ನು ಮಾತ್ರ ಬಯಸುತ್ತಾರೆ," ಎಂದು ಕೂಡಾ ಆರೋಪ ಮಾಡಿರುವ ಕವಿ ಕುಮಾರ್ ವಿಶ್ವಾಸ್, ಎಎಪಿ ನಾಯಕರ ವಿರುದ್ಧ ಭಾರಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಚುನಾವಣಾ ಅಧಿಕಾರಿಗಳ ವಿವಾದಾದ್ಮಕ ಪತ್ರ
ಗುರುವಾರ, ಪಂಜಾಬ್‌ನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಯು ಮಾಧ್ಯಮ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು "ದುರುದ್ದೇಶಪೂರ್ವಕವಾಗಿ ಸೃಷ್ಟಿ ಮಾಡಿ" ವಿಶ್ವಾಸ್ ಅವರ ಸಂದರ್ಶನವನ್ನು ಪ್ರಕಟಿಸದಂತೆ ತಡೆಯಲು ವಿವಾದಾತ್ಮಕ ಪತ್ರವನ್ನು ಹೊರಡಿಸಿದ್ದಾರೆ. ಕೇಜ್ರಿವಾಲ್‌ರ ಮಾನನಷ್ಟ ಮಾಡುವ ಉದ್ದೇಶದಿಂದ ಹಾಗೂ ವಿವಿಧ ಧಾರ್ಮಿಕ ಗುಂಪುಗಳು ಮತ್ತು ಸಮುದಾಯಗಳ ವಿರುದ್ಧ ದ್ವೇಷ, ಕೆಟ್ಟ ಇಚ್ಛೆ, ಹಗೆತನದ ಭಾವನೆಯನ್ನು ಉತ್ತೇಜಿಸುವ ಈ ಹೇಳಿಕೆಯನ್ನು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳನ್ನು ನಿರ್ಬಂಧಿಸಿ ವಿವಾದಾತ್ಮಕ ಪತ್ರವನ್ನು ಹೊರಡಿಸಿದ್ದಾರೆ. ಆದಾಗ್ಯೂ, ಈ ವಿವಾದಾತ್ಮಕ ಪತ್ರವನ್ನು ಮುಖ್ಯ ಚುನಾವಣಾ ಅಧಿಕಾರಿ ಶೀಘ್ರದಲ್ಲೇ ಹಿಂಪಡೆದಿದ್ದಾರೆ.

ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ
ಪಂಜಾಬ್‌ನ ಜನರು ಪ್ರತ್ಯೇಕತಾವಾದಕ್ಕೆ ಭಾರೀ ಬೆಲೆ ತೆತ್ತಿದ್ದಾರೆ ಎಂದು ಹೇಳುವ ಮೂಲಕ ಕುಮಾರ್ ವಿಶ್ವಾಸ್ ಮಾಡಿರುವ ಹೇಳಿಕೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ನಂತರ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು. "ಪಂಜಾಬ್ ಸಿಎಂ ಆಗಿ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಡಾ.ಕುಮಾರ್ ವಿಶ್ವಾಸ್ ಅವರ ವೀಡಿಯೊ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ವಿನಂತಿಸುತ್ತೇನೆ. ರಾಜಕೀಯವನ್ನು ಬದಿಗಿಟ್ಟು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್‌ನ ಜನರು ಭಾರಿ ಬೆಲೆ ತೆತ್ತಿದ್ದಾರೆ. ಗೌರವಾನ್ವಿತ ಪ್ರಧಾನಿಯವರು ಪ್ರತಿಯೊಬ್ಬ ಪಂಜಾಬಿಯ ಚಿಂತೆಯನ್ನು ಪರಿಹರಿಸಬೇಕಾಗಿದೆ," ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿಯ ಪತ್ರವನ್ನು ಹಂಚಿಕೊಂಡು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಮಾನನಷ್ಟಕ್ಕೆ ಯತ್ನ ಎಂದ ಎಎಪಿ ನಾಯಕರು
ಈ ನಡುವೆ ಎಎಪಿ ನಾಯಕ ರಾಘವ್ ಚಡ್ಡಾ ಅವರು ಕೇಜ್ರಿವಾಲ್ ಅವರನ್ನು "ಮಾನನಷ್ಟ" ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ವಿರುದ್ಧ ಆರೋಪ ಮಾಡಿದ್ದಾರೆ. ""ಎಎಪಿ ಪಂಜಾಬ್‌ನಲ್ಲಿ ಸರ್ಕಾರ ರಚಿಸುವುದನ್ನು ತಡೆಯಲು ಎಲ್ಲಾ ಪಕ್ಷಗಳು ಒಗ್ಗೂಡಿದೆ. ಪಿತೂರಿಯ ಭಾಗವಾಗಿ, ಕಾಂಗ್ರೆಸ್, ಬಿಜೆಪಿ ಮತ್ತು ಅಕಾಲಿ ನಾಯಕರು ನಿರಂತರವಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಮಾನನಷ್ಟಗೊಳಿಸಲು ಅಪಪ್ರಚಾರ ಮಾಡುತ್ತಿದ್ದಾರೆ," ಎಂದು ಎಎಪಿ ನಾಯಕ ರಾಘವ್ ಚಡ್ಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications