ಪಂಜಾಬ್ ಚುನಾವಣೆ: ಫೆಬ್ರವರಿ 18ರ ಸಂಜೆ 6 ಗಂಟೆಗೆ ಪ್ರಚಾರ ಅಂತ್ಯ
ಚಂಡೀಗಢ, ಫೆಬ್ರವರಿ 18: ಫೆಬ್ರವರಿ 20 ರಂದು ನಿಗದಿಯಾಗಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರವು ಶುಕ್ರವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಚುನಾವಣಾ ಆಯೋಗವು (EC) ಎಲ್ಲಾ ಸ್ಟಾರ್ ಪ್ರಚಾರಕರು ಇಂದು ಸಂಜೆ 6 ಗಂಟೆಗೆ ಪ್ರಚಾರವನ್ನು ಕೊನೆ ಮಾಡುವಂತೆ ಸೂಚನೆ ನೀಡಿದೆ.
ಎಲ್ಲಾ ರ್‍ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ಶುಕ್ರವಾರ ನಿಗದಿತ ಸಮಯಕ್ಕೆ ಕೊನೆಗೊಳ್ಳುತ್ತವೆ ಎಂದು ಚುನಾವಣಾ ಆಯೋಗವು ಗುರುವಾರ ಘೋಷಿಸಿದೆ. ಆದರೂ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಅದರ ನಂತರ ಮನೆ-ಮನೆಗೆ ಪ್ರಚಾರಕ್ಕೆ ಕಡಿಮೆ ಸಂಖ್ಯೆಯಲ್ಲಿ ಹೋಗಬಹುದು.
ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜು ಅವರ ಪ್ರಕಾರ, "ಎಲ್ಲಾ ರಾಜಕೀಯ ಮುಖಂಡರು, ಕಾರ್ಯಕರ್ತರು ಅಥವಾ ಮತದಾರರ ನೋಂದಣಿ ಮಾಡದ ಪಕ್ಷದ ಕಾರ್ಯಕರ್ತರು ನಿರ್ದಿಷ್ಟ ಸಮಯದ ನಂತರ ಕ್ಷೇತ್ರದಿಂದ ತೆರಳಬೇಕು. ಆದಾಗ್ಯೂ, ಚುನಾವಣೆಗೆ ಒಳಪಡುವ ಕ್ಷೇತ್ರದ ಚುನಾಯಿತ ಶಾಸಕರು ಆ ನಿರ್ದಿಷ್ಟ ಭಾಗದ ಮತದಾರರಲ್ಲದಿದ್ದರೂ ಚುನಾವಣೆಯ ಸಮಯದಲ್ಲಿ ಪ್ರದೇಶವನ್ನು ತೊರೆಯುವಂತೆ ಹೇಳಬಾರದು," ಎಂದು ತಿಳಿಸಲಾಗಿದೆ.

ಪಂಜಾಬ್ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಹೋಟೆಲ್‌ಗಳು, ಲಾಡ್ಜ್‌ಗಳು, ಸಮುದಾಯ ಕೇಂದ್ರಗಳು ಮತ್ತು ಇತರ ಸ್ಥಳಗಳನ್ನು ಹೊರಗಿನವರು ಮತ್ತು ಮತದಾರರಲ್ಲದವರನ್ನು ಸ್ಥಳಾಂತರಿಸಲು ಪರಿಶೀಲನೆ ಮಾಡಲು ಪ್ರಾರಂಭ ಮಾಡುತ್ತಾರೆ ಎಂದು ಚುನಾವಣಾ ಆಯೋಗ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ರಾಜ್ಯದ 117 ಕ್ಷೇತ್ರಗಳಿಗೆ ಭಾನುವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಸುಗಮವಾಗಿ ಚುನಾವಣಾ ಪ್ರಕ್ರಿಯೆ ನಡೆಯಲು 23 ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ, ಖರ್ಚು ವೆಚ್ಚ ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ಮೂವರು ವೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.
ಭದ್ರತಾ ವಿಭಾಗದವರು ಮತದಾನದ ದಿನದವರೆಗೆ ಅವರು ನೋಂದಾಯಿತ ಮತದಾರರಾಗಿರುವ ಕ್ಷೇತ್ರದಲ್ಲಿಯೇ ಇರುವಂತೆ ಚುನಾವಣಾ ಆಯೋಗ ತಿಳಿಸಿದೆ. ರಾಜಕೀಯ ಪಕ್ಷಗಳ ರಾಜ್ಯ ಮುಖ್ಯಸ್ಥರು ತಮ್ಮ ರಾಜ್ಯ ಪಕ್ಷದ ಕಚೇರಿ ಮತ್ತು ನಿವಾಸದ ನಡುವೆ ಮಾತ್ರ ಚಲಿಸಲು ಅವಕಾಶವಿರುತ್ತದೆ. ಅದರ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ.
ಚುನಾವಣಾ ಪ್ರಚಾರ ನಿಷೇಧ
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆಯ ನಂತರ ದೂರದರ್ಶನ ಚಾನೆಲ್‌ಗಳು, ರೇಡಿಯೋ ಮತ್ತು ಪತ್ರಿಕೆಗಳಲ್ಲಿ ಚುನಾವಣಾ ಸಂಬಂಧಿತ ವಿಷಯಗಳನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. "ಮತದಾರರ ಮೇಲೆ ಪ್ರಭಾವ ಬೀರುವ ಅಥವಾ ಅಭ್ಯರ್ಥಿಗಳ ಭವಿಷ್ಯ ಅಥವಾ ರಾಜಕೀಯ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ವಿಷಯ ಮತದಾನಕ್ಕೆ 48 ಗಂಟೆಗಳ ಮೊದಲು ಅನುಮತಿ ನೀಡಲಾಗುವುದಿಲ್ಲ," ಎಂದು ಇಸಿ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 19 ಮತ್ತು 20 ರಂದು ಪತ್ರಿಕೆಗಳಲ್ಲಿ ಯಾವುದೇ ಜಾಹೀರಾತು ಪ್ರಕಟವಾಗಲು ಅದಕ್ಕೆ ಚುನಾವಣಾ ಆಯೋಗ ಪ್ರಮಾಣೀತವಾಗಿರಬೇಕು ಎಂದು ಆಯೋಗವು ಹೇಳಿದೆ. ಚುನಾವಣೆಯ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಬಲ್ಕ್ ಎಸ್‌ಎಂಎಸ್ ಹಾಗೂ ಐವಿಆರ್‌ಎಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೇಲೆ ನಿಷೇಧವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.
1,000 ಅರೆಸೇನಾ ತಂಡಗಳ ನಿಯೋಜನೆ
ಯಾವುದೇ ರೀತಿಯ ಕಾನೂನು-ಸುವ್ಯವಸ್ಥೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಐಟಿಬಿಪಿ ಸೇರಿದಂತೆ ಕೇಂದ್ರ ಸಶಸ್ತ್ರ ಅರೆಸೇನಾ ಪಡೆಗಳನ್ನು ಒಳಗೊಂಡಿರುವ 1,000 ತ್ವರಿತ ಪ್ರತಿಕ್ರಿಯೆ ತಂಡಗಳನ್ನು (ಕ್ಯೂಆರ್‌ಟಿ) ಚುನಾವಣಾ ಆಯೋಗ ರಚನೆ ಮಾಡಿದೆ. ರಾಜ್ಯದಲ್ಲಿ ಕನಿಷ್ಠ 700 ಕಂಪನಿಗಳನ್ನು ನಿಯೋಜಿಸಲಾಗಿದ್ದು, ಅದರಲ್ಲಿ 650 ಕಂಪನಿಗಳು ಬಂದಿವೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications