ಪಂಜಾಬ್ ಸಿಎಂ ಚನ್ನಿ ಸೋಲಿಸಿದ ಮೊಬೈಲ್ ಅಂಗಡಿ ಓನರ್ ಲಾಭ್ ಸಿಂಗ್
ಅಮೃತ್ ಸರ್, ಮಾರ್ಚ್ 10: ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ, ಅಮರಿಂದರ್ ಸಿಂಗ್ ಬಂಡಾಯದ ಪರಿಣಾಮವಾಗಿ 58 ವರ್ಷದ ಚನ್ನಿಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು. ಅಮರಿಂದರ್ ಸಿಂಗ್ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಬಳಿಕ ಪಂಜಾಬ್‌ನಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಚನ್ನಿ ಹೆಸರಿನ ಬಲದಲ್ಲಿ ಕಾಂಗ್ರೆಸ್ ಯಾವುದೇ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಚಮಕೌರ್ ಸಾಹಿಬ್ ಮತ್ತು ಭದೌರ್‌ನಿಂದ ಸ್ಪರ್ಧಿಸಿದ ಎರಡೂ ಕ್ಷೇತ್ರಗಳಿಂದ ಚರಣಜಿತ್ ಸಿಂಗ್ ಚನ್ನಿ ಹಿನ್ನಡೆ ಅನುಭವಿಸಿ ಸೋಲು ಕಂಡಿದ್ದಾರೆ.
ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆಸಲಾಗಿತ್ತು. ಚಮಕೌರ್ ಸಾಹಿಬ್ ಅಲ್ಲದೆ ಬರ್ನಾಲಾ ಜಿಲ್ಲೆಯ ಭದೌರ್ ಕ್ಷೇತ್ರದಲ್ಲಿ ಚರಣಜಿತ್ ಸಿಂಗ್ ಸ್ಪರ್ಧಿಸಿದ್ದರು. ಈ ಮೀಸಲು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಲಾಭ್ ಸಿಂಗ್ ಉಗೋಕೆ ಅವರು ಸ್ಪರ್ಧಿಸಿದ್ದರು. ಮೊಬೈಲ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಹಾಗೂ ಮಾಲೀಕತ್ವ ಹೊಂದಿರುವ ಲಾಭ್ ಸಿಂಗ್ ಗೆಲುವಿನ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಇನ್ನೊಂದೆಡೆ ನವಜ್ಯೋತ್ ಸಿಂಗ್ ಸಿಧು ಅವರನ್ನು ಸೋಲಿಸಿರುವುದು ಎಎಪಿಯ ಸಾಮಾನ್ಯ ಕಾರ್ಯಕರ್ತೆಯೊಬ್ಬರು ಎಂಬುದು ವಿಶೇಷ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಇಂದಿನ ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ.

1987ರಲ್ಲಿ ಜನಿಸಿರುವ ಉಗೋಕೆ, 12ನೇ ತರಗತಿ ತನಕ ವ್ಯಾಸಂಗ ಮಾಡಿದ್ದು, ನಂತರ ಮೊಬೈಲ್ ರಿಪೇರಿ ಡಿಪ್ಲೋಮಾ ಕೋರ್ಸ್ ಮಾಡಿದ್ದಾರೆ. ನಂತರ ತಮ್ಮ ಗ್ರಾಮದಲ್ಲಿ ಮೊಬೈಲ್ ಶಾಪ್ ಓಪನ್ ಮಾಡಿದ್ದರು. ಆದರೆ, ನಂತರ ಮೊಬೈಲ್ ಅಂಗಡಿ ಬಂದ್ ಮಾಡಲಾಗಿದ್ದು, ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ.
2013ರಲ್ಲಿ ಎಎಪಿ ಸೇರಿರುವ ಉಗೋಕೆ ಅವರು ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಗೋಕೆ ಅವರ ತಂದೆ ಚಾಲಕರಾಗಿದ್ದರು, ತಾಯಿ ಸರ್ಕಾರಿ ಶಾಲೆಯಲ್ಲಿ ಸಫಾಯಿ ಕರ್ಮಚಾರಿಯಾಗಿದ್ದರು.

ಈ ಬಾರಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಭದೌರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ ವಿರುದ್ಧ ಸೋತಿದ್ದಾರೆ. ಚರಂಜಿತ್ ಸಿಂಗ್ ಚನ್ನಿ ಪಂಜಾಬ್ ಚುನಾವಣೆ 2022 ರಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. 2022ರಲ್ಲಿ 117 ಕ್ಷೇತ್ರಗಳಲ್ಲಿ ಎಎಪಿ92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸನಿಹದಲ್ಲಿದ್ದು, ಅಧಿಕಾರ ಸ್ಥಾಪಿಸಲಿದೆ.

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಲೋಕ ಇನ್ಸಾಫ್ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59 ದಾಟಿದ ಎಎಪಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ಸ್ಥಾಪಿಸಲು ಮುಂದಾಗಿದೆ. ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಗೆಲುವು ಸಾಧಿಸಿದ್ದಾರೆ.












Click it and Unblock the Notifications