ಬಂಡೀಪುರ: ಕೊಳೆತ ಸ್ಥಿತಿಯಲ್ಲಿ ಆನೆ ಕಳೇಬರ ಪತ್ತೆ: ಸಾವಿಗೆ ಕಾರಣವೇನು..?
ಚಾಮರಾಜನಗರ, ಡಿಸೆಂಬರ್ 07 : ಕೊಳೆತ ಸ್ಥಿತಿಯಲ್ಲಿ ಗಂಡಾನೆಯೊಂದರ ಕಳೆಬರ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರ ಬ್ಲಾಕ್-02 ಗಸ್ತಿನ ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಗಂಡಾನೆಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದೆ. ಸತ್ತ ಆನೆಯಿಂದ 02 ದಂತಗಳನ್ನು ಬೇರ್ಪಡಿಸಿ ಇಲಾಖೆ ವಶ ಪಡಿಸಿಕೊಂಡಿದೆ. ನಂತರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಂದ್ರ ಸೂಚನೆ ಮೇರೆಗೆ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ನಿಯಮಾನುಸಾರ ಕಳೆಬರವನ್ನು ಅರಣ್ಯ ಪ್ರದೇಶದಲ್ಲೇ ಬಿಡಲಾಗಿದೆ.

ಕಾಡಾನೆಯು ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ದೃಢಪಟ್ಟಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದ ವೇಳೆ ಕೊಳೆತೆ ವಾಸನೆ ಬಂದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲಿಸಿದಾಗ ಆನೆಯೊಂದು ಸಾವನ್ನಪ್ಪಿರುವುದು ಕಂಡುಬಂದಿದೆ.
ಕೂಡಲೇ ಸಿಬ್ಬಂದಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕಾಡಾನೆಯೊಂದು ಕೊಳೆತ ಸ್ಥಿತಿಯಲ್ಲಿ ಸತ್ತಿರುವುದು ಖಚಿತವಾಗಿದೆ.
ರಾಮನಗರದಲ್ಲಿ ವಿದ್ಯುತ್ ಶಾಕ್‌ನಿಂದ ಕಾಡಾನೆ ಸಾವು
ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಮೃತಪಟ್ಟಿದ ಆನೆಯನ್ನು ಜಮೀನಿನಲ್ಲಿಯೇ ಗುಂಡಿ ತೋಡಿ ಮುಚ್ಚಿದ ಪ್ರಕರಣ ಜಿಲ್ಲೆಯ ಕನಕಪುರ ತಾಲೂಕಿನ ಸಂತೇ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂತೇಕೋಡಹಳ್ಳಿಯ ನಂಜೇಗೌಡ ಎಂಬುವರಿಗೆ ಸೇರಿದ್ದ ಜಮೀನನ್ನು ಪಿಳ್ಳೇಗೌಡ ಎನ್ನುವಾತ ನಡೆಸುತ್ತಿದ್ದು, ಆನೆಗಳ ಹಾವಳಿ ಹೆಚ್ಚಿದ ಕಾರಣ ಬೆಳೆಗಳ ರಕ್ಷಣೆಗಾಗಿ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಈ ಭಾಗಕ್ಕೆ ಬಂದ ಆನೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಈ ವಿಚಾರ ತಿಳಿದ ಪಿಳ್ಳೇಗೌಡ ವಿಚಾರ ಹೊರಬರದಂತೆ ಜೆಸಿಬಿ ಮೂಲಕ ಆನೆಯನ್ನು ಸ್ಥಳದಲ್ಲಿಯೇ ಮಣ್ಣು ಮಾಡಿದ್ದರು.
ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದು ಸ್ಥಳ ಪರಿಶೀಲನೆ ನಡೆಸಿ ಆನೆ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಿದ್ಯುತ್ ಶಾಕ್‌ನಿಂದ ಆನೆ ಮೃತಪಟ್ಟಿರುವುದು ದೃಢಪಟ್ಟಿದ್ದು, ದಂತವನ್ನು ಬೇರ್ಪಡಿಸಿ ಮತ್ತೆ ಅದೇ ಜಾಗದಲ್ಲಿ ಆನೆಯನ್ನು ಹೂಳಲಾಯಿತು. ಸದ್ಯ ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications