ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ, ಸೆಪ್ಟೆಂಬರ್, 20: ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಣಿಗಳು ಹಾವಳಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಆಗಾಗ್ಗೆ ಕಾಡಾನಗಳು ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇಗುಲದ ಆವರಣಕ್ಕೆ ಬಂದು ಭಕ್ತರನ್ನು ರೋಮಾಂಚನಗೊಳಿಸುತ್ತಿರುತ್ತವೆ. ಹಾಗೆಯೇ ಇದೀಗ ಮತ್ತೆ ಕಾಡಾನೆ ಅರಣ್ಯ ಸಿಬ್ಬಂದಿಯನ್ನು ಗುರಾಯಿಸಿ ವಾಪಾಸ್ ಕಳುಹಿಸಿದ ಘಟನೆ ಇದೇ ಬೆಟ್ಟದಲ್ಲಿ ನಡೆದಿದೆ.
ಗೋಪಾಲಸ್ವಾಮಿ ಬೆಟ್ಟ ದೇವಾಲಯಕ್ಕೆ ಬರುತ್ತಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಕಳುಹಿಸಲು ಪ್ರಯತ್ನಿಸಿದ ವೇಳೆ ಸಿಬ್ಬಂದಿಯನ್ನೇ ಕಾಡಾನೆ ಹಿಮ್ಮೆಟ್ಟಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪ್ರತಿನಿತ್ಯ ಗೋಪಾಲಸ್ವಾಮಿ ಬೆಟ್ಟದ ಶ್ರೀಕೃಷ್ಣನ ಸನ್ನಿಧಿಗೆ ಬರುವ ಗಜರಾಜ ಯಾರಿಗೂ ತೊಂದರೆ ನೀಡದೆ ತನ್ನಷ್ಟಕ್ಕೆ ವಾಪಾಸ್ಸಾಗುತ್ತಿತ್ತು. ಅದರಂತೆಯೇ ಗುರುವಾರ ಬೆಳಗ್ಗೆ ದೇಗುಲದ ಸಮೀಪ ಅಗಮಿಸುತ್ತಿದ್ದುದ್ದನ್ನ ಗಮನಿಸಿದ ಸಿಬ್ಬಂದಿ ವಾಪಾಸ್ ಕಾಡಿಗಟ್ಟಲು ಪ್ರಯತ್ನಿಸಿದ ವೇಳೆ ಅವರನ್ನೇ ಹಿಮ್ಮೆಟ್ಟಿಸಿದೆ.
ಸಿಬ್ಬಂದಿ ಗಜರಾಜನ ನಡುವೆ ನಡೆದ ದೃಶ್ಯವನ್ನ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಈ ದೃಶ್ಯ ಭಾರೀ ವೈರಲ್ ಆಗುತ್ತಿದೆ.
ವಾಹನ ಸವಾರರ ಪರದಾಟ: ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಸಮೀಪ ಮಂಗಳವಾರ ಸಂಜೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಢೀರ್ ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಕಬ್ಬಿನ ಲಾರಿ ಅಡ್ಡಗಟ್ಟಿದೆ. ಇನ್ನು ಆನೆ ಕಂಡು ಹೌಹಾರಿರುದ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ ಆನೆ ಪಕ್ಕಕ್ಕೆ ಸರಿಯುವ ತನಕ ಕಾದಿದ್ದು, ಅರ್ಧ ತಾಸಿಗಿಂತಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ. ಇನ್ನು ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಆನೆ ಬಳಿಯೇ ನಿಂತು ಹುಚ್ಚಾಟ ಮೆರೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ನಾಲ್ವರಿಗೆ ಗಾಯ: ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಗುಂಡಿನ ಪದರಗಳು ನಾಟಿ ನಾಲ್ವರು ರೈತರು ಗಾಯಗೊಂಡ ಘಟನೆ ಯಳಂದೂರು ತಾಲೂಕಿನ ಮದ್ದೂರು-ಮಲ್ಲಿಗೆಹಳ್ಳಿ ನಡುವಿನ ಜಮೀನಿನಲ್ಲಿ ನಡೆದಿದೆ.
ಮದ್ದೂರು ಗ್ರಾಮದ ಮೂರ್ತಿ, ರವಿ, ಶಿವು ಹಾಗೂ ರಂಗಸ್ವಾಮಿ ಎಂಬವರು ಗಾಯಗೊಂಡು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮುಳ್ಳಿನ ಪೊದೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಕೂಡಲೇ ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಿದ್ದಾರೆ. ಯಳಂದೂರು ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಗುಂಡು ಹಾರಿಸಿದ ವೇಳೆ ಗುಂಡಿನ ಪದರಗಳು ನಾಲ್ವರಿಗೆ ತಗುಲಿ ಗಾಯಗಳಾಗಿದೆ. ಇನ್ನು, ಚಿರತೆ ಕೂಡ ಅಸುನೀಗಿದ್ದು, ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.












Click it and Unblock the Notifications