ಹನೂರಿನಲ್ಲಿ ಕಾಡಾನೆ, ಕರಡಿ ದಾಳಿ: ರೈತರಿಗೆ ಗಂಭೀರ ಗಾಯ
ಚಾಮರಾಜನಗರ, ಡಿಸೆಂಬರ್ 15: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ರೈತರ ಮೇಲೆ ಕಾಡಾನೆಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಹಾಗೂ ರೈತನ ಮೇಲೆ ಕರಡಿ ದಾಳಿ ಮಾಡಿರುವ ಪ್ರಕರಣ ಕೂಡ ನಡೆದಿದೆ.
ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದೆ. ಹನೂರು ತಾಲೂಕಿನ ಕೊಕ್ಕಬರೆ ಗ್ರಾಮದ ಪುಟ್ಟಸ್ವಾಮಿ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಾಡಾನೆ ದಾಳಿಯ ವಿವರ
ಪುಟ್ಟಸ್ವಾಮಿ ಕಾರ್ಯನಿಮಿತ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿ ನಂತರ ಬುಧವಾರ ಸಂಜೆ 7:00 ಗಂಟೆಯ ಸಮಯದಲ್ಲಿ ಕೊಕ್ಕಬರೆ ಗ್ರಾಮಕ್ಕೆ ನಡೆದುಕೊಂಡು ತೆರಳುತ್ತಿದ್ದರು. ಈ ವೇಳೆ ಕಾಡಾನೆ ಏಕಾಏಕಿ ಮಾಡಿದೆ. ಕಾಡಾನೆ ದಾಳಿ ಪರಿಣಾಮ ಪುಟ್ಟಸ್ವಾಮಿ ಅವರ ಎರಡು ಕಾಲಿನ ಮೂಳೆಗಳು ಮುರಿದುಹೋಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ
ದನಗಳನ್ನು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ನಡೆದಿದೆ. ಬೆಳ್ಳಿತಂಬಡಿ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಎಂದು ಎಂದು ಗುರುತಿಸಲಾಗಿದೆ. ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಡು ಪಾಪಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ
ಕಾಡು ಪಾಪಗಳನ್ನು ಸಾಗಿಸುತ್ತಿದ್ದಾಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ನಡೆದಿದೆ. ಹನೂರು ತಾಲೂಕಿನ ವೀರಭದ್ರಪ್ಪ (58) ಹಾಗೂ ಮೈಸೂರಿನ ದೊಡ್ಡಕಾನ್ಯ ಗ್ರಾಮದ ಪಿ.ರಾಜು(45) ಬಂಧಿತ ಆರೋಪಿಗಳು.
ಆರೋಪಿಗಳು ಕಾಡು ಪಾಪಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅರಣ್ಯ ಸಂಚಾರಿದಳ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಾಡು ಪಾಪಗಳನ್ನು ರಕ್ಷಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಿಂದ ಈ ಪ್ರಾಣಿಗಳನ್ನು ಹನೂರು ತಾಲೂಕಿನ ಆನೆಹೊಲ ನಿವಾಸಿ ಮಹದೇವ ಎಂಬಾತ ಹಿಡಿದು ಆರೋಪಿಗಳಿಗೆ ನೀಡಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ಪೊಲೀಸರು ಮಹಾದೇವನ ಪತ್ತೆಗೆ ಬಲೆ ಬೀಸಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.











Click it and Unblock the Notifications