ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳು: ಏನೆಲ್ಲಾ ಘೋಷಣೆಗಳಾಗಿವೆ?
ಚಾಮರಾಜನಗರ, ಏಪ್ರಿಲ್ 24: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ಏಪ್ರಿಲ್ 24) ರಾಜ್ಯ ಸಚಿವ ಸಂಪುಟ ಸಭೆಯನ್ನು ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯಿತು. ಹಾಗಾದ್ರೆ ಯಾವೆಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಧಾರ್ಮಿಕ, ಪ್ರವಾಸಿ ತಾಣವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡಲಾಯಿತು. ಈ ಹಿಂದೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈ ಬಾರಿ ಮೈಸೂರು ವಿಭಾಗದ ಮಟ್ಟದ ಸಚಿವ ಸಂಪುಟ ಸಭೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದು, ಈ ವೇಳೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.

ಪ್ರಮುಖವಾಗಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗೆ ಹಲವು ಯೋಜನೆಗಳನ್ನು ಘೋಷಿಲಾಗಿದೆ. ಮಾಡಲಾಗಿದೆ. ಕಲಬುರಗಿ ವಿಭಾಗದ ಸಚಿವ ಸಂಪುಟ ಸಭೆ ಬಳಿಕ ಇದೀಗ ಇಂದು ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದೇವೆ. ಇದೇ ರೀತಿ ಬೆಳಗಾವಿ ವಿಭಾಗದ ಸಂಪುಟ ಸಭೆ ವಿಜಯಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಯಾವ್ಯಾವ ವಿಭಾಗದಲ್ಲಿ ಎಷ್ಟು ವಿಷಯಗಳ ಚರ್ಚೆ ಆಗಿದೆ?
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಮೈಸೂರು ವಿಭಾಗದ ಸಚಿವ ಸಂಪುಟ ಸಭೆಯಲ್ಲಿ 78 ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಈ ಹಿಂದೆ ಕಲಬುರಗಿ ವಿಭಾಗದಲ್ಲಿ 56 ವಿಷಯಗಳ ಚರ್ಚೆ ನಡೆದಿತ್ತು. ಇವತ್ತಿನ ಸಭೆಯಲ್ಲಿ 3,647 ಕೋಟಿ 62 ಲಕ್ಷ ರೂಪಾಯಿಗಳಷ್ಟು ಅಭಿವೃದ್ಧಿ ಕಾರ್ಯಕ್ಕೆ ಅಂಗೀಕಾರ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಕೆಲಸ ಕೊಡುವ ವಿಚಾರದಲ್ಲಿ ಕೆಲವರಿಗೆ ಈಗಾಗಲೇ ಕೆಲಸ ನೀಡಲಾಗಿದೆ. ಖಾಯಂ ಉದ್ಯೋಗ ಕೊಡಲು ಕೆಲವು ಕಾನೂನು ತೊಡಕುಗಳಿವೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಒಂದು ತೀರ್ಮಾನ ಮಾಡುತ್ತೇವೆಂದು ಹೇಳಿದರು.
ಮೈಸೂರು ನಗರದಲ್ಲಿ 390 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಸಂಪುಟ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳಿವು
* ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಎಲ್ಲಾ ಹುತಾತ್ಮರಿಗೆ ಶ್ರದ್ಧಾಂಜಲಿ ಮತ್ತು ಧರ್ಮಗುರು ಪೋಪ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ.
* 3647 ಕೋಟಿ 42 ಲಕ್ಷ ಮೌಲ್ಯದ ಕಾಮಗಾರಿಗೆ ಕ್ಯಾಬಿನೆಟ್ ಅಂಗೀಕಾರ.
* ಲೋಕೋಪಯೋಗಿ, ಬೃಹತ್-ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವಧ್ಧಿ, ಟ್ರೈಬಲ್ ಹಳ್ಳಿಗಳಿಗೆ ರಸ್ತೆಗಳಿಗೆ ಅನುದಾನ.
* 1787 ಕೋಟಿ ರೂಪಾಯಿ ನೀರಾವರಿ, ಎಸ್‌ಸಿ ಎಸ್‌ಟಿ ವರ್ಗದವರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು.
* ಮಾನವ-ಪ್ರಾಣಿ ಸಂಘರ್ಷ ತಡೆಯಲು 210 ಕೋಟಿ ರೂಪಾಯಿ ರೈಲ್ವೇ ಬ್ಯಾರಿಕೇಡ್ ಪೂರ್ಣಗೊಳಿಸಲಾಗುವುದು.
* ಕುಡಿಯುವ ನೀರಿಗಾಗಿ 315 ಕೋಟಿ, ಆರೋಗ್ಯ ಸುಧಾರಣೆಗೆ 228 ಕೋಟಿ, ಕೊಳ್ಳೇಗಾಲದಲ್ಲಿ 250 ಬೆಡ್‌ಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅಂಗೀಕಾರ.
* ಪ್ರವಾಸೋದ್ಯಮ ಇಲಾಖೆಗೆ 300 ಕೋಟಿ ರೂಪಾಯಿ ಅನುದಾನ
* ಹನೂರಿನಲ್ಲಿ ಹೊಸ ತಾಲ್ಲೂಕಿಗೆ ತಾಲ್ಲೂಕು ಆಸ್ಪತ್ರೆ, ತಾಲ್ಲೂಕು ಭವನ ನಿರ್ಮಾಣ.
* ಚಿಕ್ಕಲ್ಲೂರಿನಲ್ಲಿ ರಾಜಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಅಭಿವೃದ್ಧಿ ಕೇಂದ್ರ ನಿರ್ಮಾಣ.
* ಮೈಸೂರು ಹೊರ ವಲಯದ ಇಲವಾಲದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ ನೀಡಲು ಅಂಗೀಕಾರ.
* 40 ಕೋಟಿ ರೂಪಾಯಿ ಅಂದಾಜಿನಲ್ಲಿ ಬದನವಾಳು ಅಭಿವೃದ್ಧಿ.
* ಮೈಸೂರಿನ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 101 ಕೋಟಿ ರೂಪಾಯಿ ಮೊತ್ತದ ಜಾಗ ನೀಡಲಾಗುವುದು.
* ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದ ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ.
* ಗುಂಡ್ಲುಪೇಟೆ 110 ಕೆರೆಗಳಿಗೆ ನೀರು ತುಂಬಿಸಲು 475 ಕೋಟಿ ವೆಚ್ಚ.
* ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಕುಡಿಯುವ ನೀರು, ಒಳ ಚರಂಡಿ ನಿರ್ಮಾಣ
ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ರೂಪಾಯಿ. ಒಟ್ಟು 3647.62 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದಲ್ಲಿ ತುರ್ತು ಅಭಿವೃಧ್ಧಿ ಕಾರ್ಯಗಳು ನಡೆಯಲಿವೆ.












Click it and Unblock the Notifications