Wayanad landslide: 7 ಮಂದಿಯನ್ನು ಉಳಿಸಿ ಪಾರಾಗಿ ಬಂದ ಗುಂಡ್ಲುಪೇಟೆ ವೃದ್ಧ
ಚಾಮರಾಜನಗರ, ಜುಲೈ, 1: ವಯನಾಡು ದುರಂತದಲ್ಲಿ ಹಲವು ಮನಕಲುಕುವ ವಿಚಾರಗಳು, ಸಿನಿನೀಯ ಶೈಲಿಯಂತೆ ಬದುಕುಳಿದವರ ಕಥೆಗಳು ಬೆಳಕಿಗೆ ಬರುತ್ತಿದ್ದು, ಅದೇ ರೀತಿ ಭೂ ಕುಸಿತದಲ್ಲಿ ಗುಂಡ್ಲುಪೇಟೆ ವೃದ್ಧರೊಬ್ಬರು ಪಾರಾಗಿ ಬಂದಿದ್ದಾರೆ. ಜೊತೆಗೆ, 7 ಮಂದಿಯನ್ನು ಉಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬುವರು ಕೇರಳದ ದುರಂತದಲ್ಲಿ ಸಿಲುಕಿ ಕೊನೆಗೇ ಬದುಕಿ ಬಂದಿದ್ದೇ ರೋಚಕವಾಗಿದೆ. ಈ ನಡುವೆ ಮನೆಯಲ್ಲಿ ನಿದ್ರೆಗೆ ಜಾರಿದ್ದ 7 ಮಂದಿಯನ್ನೂ ಕಾಪಾಡಿದ್ದಾರೆ.

ಅಣ್ಣನ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ: ಕೇರಳದ ಚೂರಲ್ ಮಲೆಯಲ್ಲಿ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಅಣ್ಣ ಅಸುನೀಗಿದ್ದರು. ಅವರ ತಿಥಿ ಕಾರ್ಯಕ್ಕೆ ತೆರಳಿದ್ದ ಸ್ವಾಮಿಶೆಟ್ಟಿ ಅಲ್ಲೇ ಉಳಿದುಕೊಂಡಿದ್ದರು. ಅಣ್ಣನ ಮನೆಯಲ್ಲಿ ಅತ್ತಿಗೆ, ಮಗಳು, ಅಳಿಯ, ಮೂವರು ಮಕ್ಕಳಿದ್ದರು.
ಸೋಮವಾರದಂದು ಸುರಿಯುತ್ತಿದ್ದ ಜೋರುಮಳೆಗೆ ಸ್ವಾಮಿಶೆಟ್ಟಿ ಅವರಿಗೆ ನಿದ್ರೆ ಬರದಂತಾಗಿತ್ತು. ಬಾಗಿಲು ಬಡಿಯುವ ಶಬ್ಧದಂತೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಮೊದಲ ಬಾರಿ ಬಾಗಿಲು ತೆಗೆದು ನೋಡಿದರು. ಬಳಿಕ, ಎರಡನೇ ಬಾರಿ ಬಾಗಿಲು ತೆಗೆಯುತ್ತಿದ್ದಂತೆ ತಾವು ಮುಳುಗುವ ಮಟ್ಟಿಗೆ ಮನೆಯೊಳಕ್ಕೆ ನೀರು ಬಂದಿದೆ. ಕೂಡಲೇ, ಕೋಣೆಗಳ ಬಾಗಿಲು ಬಡಿದು ಎಲ್ಲರನ್ನೂ ಎಬ್ಬಿಸಿ ಕಂಬಿಯೊಂದನ್ನು ಹಿಡಿದು ಎತ್ತರದ ಪ್ರದೇಶಕ್ಕೆ ಹತ್ತಿಸಿದ್ದಾರೆ.
ಬಾಗಿಲು ತೆಗೆದ ನಂತರ ನೀರು ನುಗ್ಗಿದ ರಭಸಕ್ಕೆ ಎದೆ ನೋವು ಕಾಣಿಸಿಕೊಂಡರೂ ಬದುಕಬೇಕೆಂಬ ಛಲದಲ್ಲಿ ನೀರಿನ ನಡುವೆ ಬೆಟ್ಟ ಏರಿದ್ದಾರೆ. ಬೆಟ್ಟ ಏರಲು ಬೀಡಿ ಹೊತ್ತಿಸಲು ಇಟ್ಟುಕೊಂಡಿದ್ದ ಲೈಟರ್ ಮೂಲಕ ಬೆಳಕು ಮಾಡಿಕೊಂಡು ಪ್ರವಾಹಕ್ಕೆ ಸಡ್ಡು ಹೊಡೆದಿದ್ದಾರೆ.
ಬೆಳಗಿನ ಜಾವ 4ಕ್ಕೆ ಗುಡ್ಡದ ಮೇಲಿನ ತಮ್ಮ ಮನೆಯವರೆಲ್ಲರನ್ನೂ ಭೇಟಿ ಮಾಡಿದ ಸ್ವಾಮಿಶೆಟ್ಟಿ ಒಂದು ಹಗಲು, ಒಂದು ರಾತ್ರಿ ಮಳೆಯಲ್ಲಿ ತೊಯ್ದು ಪಾರಾಗಿದ್ದಾರೆ. ತಾವಿದ್ದ ಮನೆಯ ಒಂದು ಗೋಡೆ ಬಿಟ್ಟರೇ ಎಲ್ಲವೂ ಕೊಚ್ಚಿ ಹೋಗಿದ್ದು, ಈಗಲೂ ಆ ಘಟನೆ ನೆನೆಸಿಕೊಂಡು ಬಿಕ್ಕಳಿಸುತ್ತಾರೆ.
ಗುರುವಾರ ಬೆಳಗಿನ ಜಾವ ತ್ರಯಂಬಕರಪುರದ ಮನೆಗೆ ಗುಂಡ್ಲುಪೇಟೆ ತಹಶೀಲ್ದಾರ್ ತಂಡ ಸುರಕ್ಷಿತವಾಗಿ ಕರೆತಂದಿದ್ದಾರೆ. ಒಂದು ಹಗಲು, ಒಂದು ರಾತ್ರಿ ಇಡೀ ಮಳೆಯಲ್ಲಿ ತೋಯ್ದು ದುರಂತದಲ್ಲಿ ಪಾರಾಗುವ ಜೊತೆಗೆ ಸಿನಿಮೀಯ ಶೈಲಿಯಲ್ಲಿ ಮನೆಯಲ್ಲಿದ್ದ 7 ಮಂದಿಯನ್ನು ಕಾಪಾಡಿದ್ದಾರೆ.
ದುರಂತದ ವಿಚಾರ ತಿಳಿದು ಮನೆಯಲ್ಲಿ ಢವಢವ: ಸ್ವಾಮಿಶೆಟ್ಟಿ ಕುಟುಂಬಸ್ಥರು ದುರಂತದ ವಿಚಾರ ತಿಳಿದು ಮನೆಯಲ್ಲಿ ಭಯಭೀತರಾಗಿದ್ದರು. ಊಟವೂ ಸೇರುತ್ತಿರಲಿಲ್ಲ, ಟಿವಿ ನೋಡಿದರೇ ಭಯ ಆಗುತ್ತಿತ್ತು. ಫೋನ್ ಸಂಪರ್ಕವೂ ಇರಲಿಲ್ಲ. ಮಂಗಳವಾರದಂದು ಸ್ವಾಮಿಶೆಟ್ಟಿ ಚೆನ್ನಾಗಿದ್ದಾರೆಂಬ ಮಾಹಿತಿ ಬಂದ ಬಳಿಕ ಮನಸ್ಸು ಹಗುರವಾಯಿತು ಎಂದು ಪತ್ನಿ ನಾಗಮ್ಮ ಭಾವುಕರಾದರು.












Click it and Unblock the Notifications