ಬಂಡೀಪುರ: ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡಿ ಜಿಂಕೆಗಳ ಕಾದಾಟ-ವಿಡಿಯೋ ವೈರಲ್
ಚಾಮರಾಜನಗರ, ಮೇ, 17: ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಪ್ರಾಣಿಗಳ ಕಾದಾಟದ ದೃಶ್ಯಗಳು ಸದ್ದು ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಅಂತಹದ್ದೇ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಾಹನಗಳ ಸಂಚಾರವಿದ್ದರೂ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಪ್ರಸಂಗ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ ರಸ್ತೆಯಲ್ಲಿ ನಡೆದಿದೆ.

ಹತ್ತಾರು ಜಿಂಕೆಗಳು ಮೇಯುತ್ತಿದ್ದರೆ, ಎರಡು ಜಿಂಕೆಗಳು ಮಾತ್ರ ನಾನಾ-ನೀನಾ ಎಂದು ಕಾಳಗಕ್ಕೆ ಇಳಿದಿದ್ದವು. ಈ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೆರೆಹಿಡಿದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಾಹನಗಳ ಹಾರ್ನ್ ಕೇಳುತ್ತಿದ್ದಂತೆ ಜಿಂಕೆ ಹಿಂಡು ಚದುರಿದಾಗ, ಕಾಳಗಕ್ಕೆ ಇಳಿದಿದ್ದ ಜಿಂಕೆಗಳು ಕೂಡ ಕಾಡಿಗೆ ಕಾಲ್ಕಿತ್ತ ಘಟನೆಯೂ ನಡೆದಿದೆ. ಇನ್ನು ಈ ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆ.
ನಾಯಿಗಳ ದಾಳಿಗೆ ಹೆದರಿದ ಕತ್ತೆಕಿರುಬ: ಅಪರೂಪವಾಗಿ ಕಾಣಸಿಗುವ ಪ್ರಾಣಿಯೊಂದನ್ನು ಅರಣ್ಯ ಇಲಾಖೆ ರಕ್ಷಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸಮೀಪದ ಚೆನ್ನಿಕಟ್ಟೆ ಹಾಡಿಯಲ್ಲಿ ನಡೆದಿದೆ. ಹಾಗಾದರೆ ಆ ಪ್ರಾಣಿ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗುಂಡ್ಲುಪೇಟೆ ತಾಲೂಕಿನ ಚೆನ್ನಿಕಟ್ಟೆ ಹಾಡಿಯಲ್ಲಿ ನಾಯಿಗಳ ದಾಳಿಯಿಂದ ಬಚಾವಾಗಿ ಸೇತುವೆ ಕೆಳಗೆ ಹೈನಾ (ಕತ್ತೆಕಿರುಬ) ಅಡಗಿ ಕುಳಿತಿದ್ದು, ಈ ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದನ್ನು ರಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬದುಕಿದೆಯಾ ಬಡಜೀವವೇ ಎಂದು ಸೇತುವೆ ಕೆಳಗೆ ಅಡಗಿದ್ದ ಹೈನಾ ಮತ್ತೇ ಕಾಡಿನ ಹಾದಿ ಹಿಡಿದಿದೆ. ಕತ್ತೆ ಕಿರುಬ ಇದೀಗ ಆರೋಗ್ಯವಾಗಿದ್ದು, ನಾಯಿಗಳ ದಾಳಿಯಿಂದ ಬಚಾವಾಗಲು ಸೇತುವೆ ಕೆಳಗೆ ಅಡಗಿತ್ತು. ಇದೀಗ ಅದು ಕಾಡಿನತ್ತ ತೆರಳಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಗುಂಡ್ಲುಪೇಟೆ ಬಳಿ ಅಪರೂಪದ ಪ್ರಾಣಿ ಓಡಾಟ: ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಮಹದೇಶ್ವರ ಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ಕತ್ತೆ ಕಿರುಬ ಓಡಾಟದ ದೃಶ್ಯ ಸೆರೆಯಾಗಿದ್ದು, ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೈನಾ (ಕತ್ತೆಕಿರುಬ) ಅಪರೂಪವಾಗಿ ಕಾಣಸಿಗುತ್ತದೆ. ಇದೀಗ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಮಹದೇಶ್ವರ ಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ಈ ಪ್ರಾಣಿ ಓಡಾಡಿದ್ದು, ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications