ಕೊಳ್ಳೇಗಾಲ ಸಮೀಪ ಹಳ್ಳಕ್ಕೆ ಉರುಳಿದ ಟಾಟಾ ಸುಮೋ: 11 ಮಂದಿಗೆ ಗಾಯ
ಚಾಮರಾಜನಗರ, ಜೂನ್, 10: ನಿಯಂತ್ರಣ ತಪ್ಪಿದ ಟಾಟಾ ಸುಮೋ ಹಳ್ಳಕ್ಕೆ ಉರುಳಿ 11 ಮಂದಿಗೆ ಗಾಯಗಳಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಸಮೀಪ ನಡೆದಿದೆ.
ಕನಕಪುರ ತಾಲೂಕಿನ ಅರಳಗಡ್ಡಕಲ್ಲು ಗ್ರಾಮದ ಕಾರು ಚಾಲಕ ಲಿಂಗೇಗೌಡ (50), ಕನಕಪುರ ತಾಲೂಕಿನ ತಟಗುಪ್ಪೆ ಗ್ರಾಮದ ಅಮೂಲ್ಯ (12), ಕನಕಪುರ ತಾಲೂಕಿನ ಆನಂದ್ (10), ಶಿವಮ್ಮ (50), ಮಾದಪ್ಪ (60), ಚಂದ್ರು (45), ಮಾದೇವಮ್ಮ (50), ಬಿ. ಶಿವಮ್ಮ (50), ರುದ್ರಮ್ಮ(30), ಚಿಕ್ಕಭೈರಪ್ಪ (60) ಗಾಯಗೊಂಡವರು.

ಕನಕಪುರ ಮೂಲದ 13 ಮಂದಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಾಸ್ ಆಗುತ್ತಿದ್ದ ವೇಳೆ ಧನಗೆರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡ್ಡಕ್ಕೆ ಗುದ್ದಿ ಟಾಟಾ ಸುಮೋ ಹಳ್ಳಕ್ಕೆ ಉರುಳಿದೆ.
ಇನ್ನು ಈ ಕಾರಿನಲ್ಲಿದ್ದ 13 ಮಂದಿಯಲ್ಲಿ 11 ಮಂದಿಗೆ ಗಾಯಗಳಾಗಿದ್ದು, ಸಾರ್ವಜನಿಕರು ಮತ್ತು ಪೊಲೀಸರು ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಈ ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲೇ ಇಬ್ಬರು ಸಾವು: ಮುಂದೆ ಚಲಿಸುತ್ತಿದ್ದ ಲಾರಿಗೆ ಕುರಿ ತುಂಬಿದ್ದ ಅಶೋಕ್ ಲೈಲಾಂಡ್ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ನಗರದ ಹೊರವಲಯದ ಆರ್.ಕೆ.ಪವರ್ ಜಿನ್ ಬಳಿ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಮೃತರನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್(55) ಹಾಗೂ ಬೆಳೆಗೆರೆ ಶಿವಲಿಂಗಪ್ಪ (65) ಮೃತರು ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಚಳ್ಳಕೆರೆಯ ತಾಲೂಕಿನ ತನ್ನ ಗ್ರಾಮದಿಂದ ಹಿರಿಯೂರು ಕುರಿ ಸಂತೆಗೆ ಕುರಿ ವ್ಯಾಪಾರ ಮಾಡಲು ಅಶೋಕ್ ಲೈಲ್ಯಾಂಡ್ ಗಾಡಿಯಲ್ಲಿ ಕುರಿ ತುಂಬಿಕೊಂಡು ಬರುತ್ತಿರುವಾಗ ಮುಂದೆ ಚಲಿಸುತ್ತಿದ್ದ ಲಾರಿಗೆ ಅಶೋಕ್ ಲೈಲಾಂಡ್ ಗಾಡಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಅಪಘಾತದ ರಭಸಕ್ಕೆ ಅಶೋಕ್ ಲೈಲ್ಯಾಂಡ್ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications