Himavad Gopalaswamy Hills: ಥೇಟ್ ಕಾಶ್ಮೀರದಂತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮದ ಮಳೆ
Himavad Gopalaswamy Hills: ರಾಜ್ಯದ ಹಲವೆಡೆ ಭೀಕರ ಚಳಿಯ ನಡುವೆಯೂ ಮಳೆ ಮುಂದುವರೆದಿದೆ. ಇನ್ನು ನಾಡಿನ ಪ್ರಮುಖ ಪ್ರವಾಸಿ ತಾಣ ಮತ್ತು ಯಾತ್ರ ಸ್ಥಳದಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಈಗ ಹಿಮದ ಮಳೆ ಆಗುತ್ತಿದೆ. ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಹಿಮಾವೃರ ವಾತಾವರಣ ಸೃಷ್ಟಿಯಾಗಿದೆ.
ವರ್ಷಪೂರ್ತಿ ಹಿಮಚ್ಛಾದಿತ ಆಗಿದ್ದರೂ ಈಗ ಚಳಿಗಾಲ ಹಿನ್ನೆಲೆ ಮತ್ತು ಫೆಂಗಲ್ ಚಂಡಮಾರುತದ ಪರಿಣಾಮ ಹಿಮದ ಮಳೆಯೇ ಸುರಿಯುತ್ತಿದ್ದು, ಪ್ರವಾಸಿಗರು ಕರ್ನಾಟಕದಲ್ಲಿ ಕಾಶ್ಮೀರದಲ್ಲಿರುವ ಅನುಭವ ಪಡೆಯುತ್ತಿದ್ದಾರೆ.

ಮಳೆ ನಡುವೆ ಹಿಮ ಆಸ್ವಾದಿಸಲು, ಆಧ್ಯಾತ್ಮಿಕತೆಯಲ್ಲಿ ಮಿಂದೇಳಲು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೂಕ್ತ ಸ್ಥಳವಾಗಿದ್ದು, ಈಗ ಬೆಟ್ಟವೇ ಹಿಮದೊಳಗೆ ಇದ್ದಂತೆ ಭಾಸವಾಗುತ್ತಿದೆ. ಬೆಟ್ಟದಲ್ಲಿ ಆಗಾಗ್ಗೆ ತುಂತುರು ಮಳೆ ಆಗುತ್ತಿದ್ದು, ಸದಾ ಬೆಟ್ಟವಲ್ಲದೇ ಸುತ್ತಮುತ್ತಲ ಪರಿಸರ ಮಂಜಿನಿಂದ ತುಂಬಿದ್ದು, ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಧ್ಯಾಹ್ನ 1 ಗಂಟೆ ಆದರೂ ಮುಂಜಾನೆ 6ರಂತೆ ಇಲ್ಲಿನ ವಾತಾವರಣ ಗೋಚರಿಸುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಒಳಪಡಲಿದ್ದು, ಸಮುದ್ರ ಮಟ್ಟದಿಂದ 4,800 ಅಡಿ ಎತ್ತರದಲ್ಲಿರುವುದರಿಂದ ಕೂಲ್ ಕೂಲ್ ವಾತಾವರಣ ಸದಾ ಇರಲಿದೆ. ಒಟ್ಟಿನಲ್ಲಿ ಪ್ರಕೃತಿ ಪ್ರಿಯರು ಚುಮು ಚುಮು ಚಳಿ ನಡುವೆಯೂ ಹಿಮದ ಮಳೆಯನ್ನು ಅನುಭವಿಸುತ್ತಿದ್ದಾರೆ. ಇನ್ನು ಇಲ್ಲಿಗೆ ಬೆಂಗಳೂರಿನಿಂದ 226 ಕಿಲೋ ಮೀಟರ್ ಆಗಲಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗ: ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬೆಂಗಳೂರಿನಿಂದ 220 ಕಿಲೋ ಮೀಟರ್ ಮತ್ತು ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಬೆಟ್ಟದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಗುಂಡ್ಲುಪೆಟೆ ಪಟ್ಟಣದಲ್ಲಿ ಉಳಿಯಲು ವಸತಿ ಗೃಹಗಳಿವೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಡೆಸುವ ಬಂಡೀಪುರ ಸಫಾರಿ ಲಾಡ್ಜ್ ಗೋಪಾಲಸ್ವಾಮಿ ಬೆಟ್ಟದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಲಭ್ಯ ಇವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ: ಬಂಡೀಪುರ ರಾಷ್ಟ್ರೀಯ ಉದ್ಯಾನ ಭಾರತದಲ್ಲಿ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಹುಲಿಗಳು, ಕಾಡು ನಾಯಿ, ಕಾಡುಹಂದಿ, ಆನೆಗಳು, ಕರಡಿಗಳು, ಚಿರತೆ, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳ ದೃಶ್ಯವನ್ನು ಸವಿಯಬಹುದಾಗಿದೆ. ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ಸಫಾರಿಯನ್ನು ನಡೆಸುತ್ತದೆ. ಗುಂಪುಗಳಲ್ಲಿ ಆಗಮಿಸುವ ಪ್ರವಾಸಿಗರು ಬಸ್ ಸಫಾರಿಯನ್ನು ಆಯ್ದುಕೊಳ್ಳಬಹುದಾಗಿದೆ.
ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟ ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಪ್ರಮುಖ ಪೂಜಾ ಕೇಂದ್ರವಾಗಿದೆ. ಇದು ಶಿವನಿಗೆ ಅರ್ಪಿತವಾಗಿದೆ ಎನ್ನುವ ಉಲ್ಲೇಖವಿದೆ. ಮಲೆ ಮಹದೇಶ್ವರ ಬೆಟ್ಟವನ್ನು "ಏಳು ಮಲೆ" ಅಂತಲೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟದ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲ ಮಲೆಗಳನ್ನು ಒಳಗೊಂಡಿದೆ.












Click it and Unblock the Notifications