ರೆಸಾರ್ಟ್‌ನಲ್ಲಿ ಸಿದ್ದರಾಮಯ್ಯ ಗೋಪ್ಯ ಸಭೆ,ಪುತ್ರನ ಗೆಲ್ಲಿಸಲು ಪ್ಲಾನ್
ಚಾಮರಾಜನಗರ, ಮಾರ್ಚ್ 30: ಗುಂಡ್ಲುಪೇಟೆ ತಾಲ್ಲೂಕಿನ ಸೆರಾಯ್ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 30)ರ ವರೆಗೆ ಮಧ್ಯಾಹ್ನದವರೆಗೆ ತಮ್ಮ ಕೆಲವು ಆಪ್ತರ ಜತೆ ಗೋಪ್ಯ ಸಭೆ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ವರಣು ಕ್ಷೇತ್ರದಿಂದ ಗೆಲ್ಲಿಸುವುದು ಹಾಗೂ ತಾವು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಗೆಲುವಿಗೆ ಕಾರ್ಯತಂತ್ರ ಚರ್ಚೆ ಮಾಡುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ವೆಂಕಟೇಶ್, ಮುಖಂಡರಾದ ಮರೀಗೌಡ, ಚೆನ್ನಾರೆಡ್ಡಿ, ನಂಜಪ್ಪ ಅವರು ಮೊದಲ ಹಂತದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇವಲ ಆಪ್ತೇಷ್ಟರಿಗೆ ಮಾತ್ರವೇ ಈ ಸಭೆಗೆ ಆಹ್ವಾನವಿತ್ತು.

ಸಿದ್ದರಾಮಯ್ಯ ಇರುವ ಮೂರು ಕೊಠಡಿಗಳಿಗೆ ಸೇವೆ ಒದಗಿಸುವ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದ ಹಲವು ಸ್ಥಳೀಯ ಮುಖಂಡರಿಗೆ ರೆಸಾರ್ಟ್ ಪ್ರವೇಶಕ್ಕೆ ಅನುಮತಿ ನೀಡಿಲ್ಲ.
ಶಾಸಕರಾದ ಭೈರತಿ ಬಸವರಾಜ್ ಹಾಗೂ ಪುಟ್ಟರಂಗಶೆಟ್ಟಿ ಅವರನ್ನೂ ಭದ್ರತಾ ಸಿಬ್ಬಂದಿ ತಡೆದರು. ಕೆಲಕಾಲದ ನಂತರ ಅವರನ್ನು ರೆಸಾರ್ಟ್ ಒಳಗೆ ಬಿಡಲಾಯಿತು. ಆದರೆ, ಶಾಸಕ ಎಂ.ಕೆ.ಸೋಮಶೇಖರ್ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ನಂತರ, ಅವರು ವಾಪಸ್ ಮೈಸೂರಿಗೆ ತೆರಳಿದ್ದಾರೆ.
ತಮ್ಮ ಉಮೇದುವಾರಿಕೆಯ ಜೊತೆಗೆ ಪುತ್ರ ಯತೀಂದ್ರ ಅವರನ್ನು ಗೆಲ್ಲಿಸುವ ಬಗ್ಗೆಯೂ ಹಠ ತೊಟ್ಟಿರುವ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ 'ಪ್ರಭೆ' ಕಳೆದುಹೋಗದಂತೆ ಹಿಡಿದಿಟ್ಟುಕೊಳ್ಳಲು ಎಲ್ಲ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ.











Click it and Unblock the Notifications