ರಾಮಮಂದಿರವೂ ರಾಜಕಾರಣ: ಸಚಿವ ಕೆ.ವೆಂಕಟೇಶ್ ಹೀಗೆ ಹೇಳಿದ್ದೇಕೆ?
ಚಾಮರಾಜನಗರ, ಜನವರಿ, 02: ನಾವು ಯಾರನ್ನು ಓಲೈಕೆ ಮಾಡುತ್ತಿಲ್ಲ, ನಾವು ಕೂಡ ಹಿಂದೂಗಳೇ ಎಂದು ಹಿಂದೂ ಕರಸೇವಕನ ಬಂಧನ ಮಾಡಿರುವ ಸಂಬಂಧ ಸಚಿವ ಕೆ.ವೆಂಕಟೇಶ್ ಹೇಳಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ, ಜನರನ್ನು ಮೆಚ್ಚಿಸಲು ಏನೇನೋ ಮಾಡುತ್ತಿದ್ದಾರೆ. ನಮಗೆ ಎಲ್ಲರೂ ಒಂದೇ, ಹಿಂದೂಗಳು ಒಂದೇ, ಮುಸ್ಲಿಂರು, ಕ್ರೈಸ್ತರು ಒಂದೇ, ನಾವುಗಳು ಹಿಂದೂಗಳೇ ಅಲ್ವಾ ಎಂದರು. ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ, ರಾಮಮಂದಿರ ರಾಜಕಾರಣವಲ್ಲದೇ ಮತ್ತೇನು ಎಂದು ಕಿಡಿಕಾರಿದರು.

ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ
ಇನ್ನು ಸಿಎಂ ಸಿದ್ದರಾಮಯ್ಯ ಅವರೇ ಶ್ರೀರಾಮ, ಮತ್ತೆ ಯಾಕೆ ಆ ರಾಮನಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನವಿಲ್ಲದ ವಿಚಾರಕ್ಕೆ ಉತ್ತರಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ಧರಾಮಯ್ಯ ಅವರೇ ರಾಮ, ಆ ರಾಮನಿಗೇಕೆ ಹೋಗಿ ಪೂಜಿಸಬೇಕು. ಸಿದ್ದರಾಮನ ಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ, ಅದು ಬಿಜೆಪಿ ಅವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ ಎಂದು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಬಗ್ಗೆ ವ್ಯಂಗ್ಯವಾಡಿದ್ದರು.
ನಮ್ಮ ರಾಮ ಎಲ್ಲಾ ಕಡೆಗೂ ಇದ್ದಾನೆ, ನಾನು ಆಂಜನೇಯ. ನಾವೆಲ್ಲಾ ಶ್ರೀರಾಮನ ಭಕ್ತರು. ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ ಎಂದು ಹೇಳಿದ್ದರು.
ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಠಿಯ ಭ್ರಮೆ ಬಿಜೆಪಿಗಿದೆ. ಬಿಜೆಪಿ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ? ಎಂದು ಪ್ರಶ್ನಿಸಿದರು. ಅಲ್ಲದೆ ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ? ಎಂದು ಮತ್ತೊಮ್ಮೆ ಪ್ರಶ್ನೆ ಹಾಕಿದ್ದರು.
ನಾವೆಲ್ಲಾ ಹಿಂದೂಗಳೇ, ಹಿಂದೂ, ಹಿಂದೂ ಧರ್ಮವನ್ನು ಬಿಜೆಪಿ ಕೊಂಡುಕೊಂಡಿಲ್ಲ. ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ?, ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ನಾಯಿ ನರಿ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ. ಅಂಥವರ ಕಣ್ಣಿರೊರೆಸಿ ಸೂರುಕೊಟ್ಟು ರಕ್ಷಣೆ ಮಾಡುವ ಕೆಲಸವಾಗಬೇಕಿದೆ ಎಂದರು.
ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ. ಆಗ ನಿಜವಾದ ರಾಮ ಬಂದು ಆಶೀರ್ವಾದ ಮಾಡುತ್ತಾನೆ. ವೋಟಿನ ರಾಮ ಅಲ್ಲ, ಓಟಿಗಾಗಿ ಬಿಜೆಪಿ ರಾಮನ ಮಾಡುವುದು ಬೇಡ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications