ಆರ್‌ಎಸ್‌ಎಸ್‌ನಲ್ಲಿ ನಾಯಕತ್ವದ ಪೈಪೋಟಿ ಇಲ್ಲ: ಶಾಸಕ ಎನ್. ಮಹೇಶ್
ಚಾಮರಾಜನಗರ. ಜುಲೈ, 27: ದೇಶದಲ್ಲಿ ಆರ್‌ಎಸ್‌ಎಸ್ ಮಾತ್ರ ಬೇರ್ಪಡೆಯಾಗದೇ ಉಳಿದಿರುವುದು ತುಂಬಾ ವಿಶೇಷ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ನಾಯಕತ್ವ ಪೈಪೋಟಿಯಿಲ್ಲ ಎಂದು ಚಾಮರಾಜನಗರದಲ್ಲಿ ಶಾಸಕ ಎನ್. ಮಹೇಶ್ ಹೇಳಿದರು.
ನಗರದಲ್ಲಿ ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಶತಮಾನದ ಹೊಸ್ತಿಲಲ್ಲಿ ಇದೆ. ಇಷ್ಟು ವರ್ಷಗಳ ಕಾಲ ಅದು ವಿಘಟನೆಯಾಗದೇ ಉಳಿದಿರುವುದೇ ನನಗೆ ಕುತೂಹಲ ಹುಟ್ಟಿಸಿದೆ. ಹಲವಾರು ಚಳವಳಿ ಬಗ್ಗೆ ಅಧ್ಯಯನ ಮಾಡಿದ್ದೇನೆ. 10 ವರ್ಷಕ್ಕೆ ಹತ್ತಾರು ಡಿವೈಡ್‌ಗಳು ಆಗುತ್ತವೆ. ಆದರೆ ಆರ್‌ಎಸ್ಎಸ್ ನೂರರ ಸಮೀಪವಿದ್ದರೂ ವಿಘಟನೆಯಾಗದೇ ಉಳಿಯಲು ನಾಯಕತ್ವ ಪೈಪೋಟಿ ಇಲ್ಲದಿರುವುದು. ಮತ್ತು ಸಂಘ ಚಾಲಕರು ಕೂಡ ಕಾರ್ಯಕರ್ತರಾಗಿ ದುಡಿಯುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಆರ್‌ಎಸ್ಎಸ್ ಸಾಮೀಪ್ಯಕ್ಕೆ ಬರುವ ಮುನ್ನ ಹಲವು ಸಂಶಯಗಳಿತ್ತು. ಇನ್ನೂ ಅಧ್ಯಯನ ಮಾಡಬೇಕಿರುವುದರಿಂದ ಈಗಲೂ ಸಂಶಯಗಳಿವೆ. ಆದರೆ ಪೂರ್ವಗ್ರಹಗಳಿಲ್ಲ. ಮುಕ್ತ ಮನಸ್ಸಿನಿಂದ ವಿಚಾರಗಳನ್ನು ಗ್ರಹಿಸುತ್ತಿದ್ದೇನೆ ಎಂದರು.

ಆರ್‌ಎಸ್ಎಸ್ ಕಾರ್ಯಕರ್ತರ ಶ್ರದ್ಧೆ ಮೆಚ್ಚವಂತದ್ದಾಗಿದೆ. ಗುರಿ ಮುಟ್ಟುವ ತನಕ ಅವರು ತಮ್ಮ ನಿಲುವನ್ನು ಬಿಟ್ಟುಕೊಡುವುದಿಲ್ಲ. ಕಾರ್ಯಕರ್ತರ ಬದ್ಧತೆ, ಶ್ರದ್ಧೆ ಮೆಚ್ಚಬೇಕು. ಮತ್ತು ಅವರ ನಿಲುವುಗಳು ಯಾವಾಗಲೂ ಪ್ರಶ್ನಾತೀತವಾಗಿವೆ. 1925ರ ಮನಸ್ಥಿತಿ ಈಗ ಇಲ್ಲ. ಆದರೆ ಅವರ ಧ್ಯೇಯ, ಶ್ರದ್ಧೆ, ಗುರಿ ಬದಲಾಗಿಲ್ಲ. ತಮ್ಮ ಗುರಿಯಲ್ಲಿ ಯಶಸ್ಸು ಕಾಣುತ್ತಲೇ ಇದ್ದಾರೆ ಎಂದರು. ಆರ್‌ಎಸ್ಎಸ್ ಬಗ್ಗೆ ಯಾರದರೂ ಕೊಂಕು ಮಾತನಾಡಿ, ಬೈದರೆ ಕಾರ್ಯಕರ್ತರು ಪ್ರತಿಕ್ರಿಯಿಸಲ್ಲ. ಕೆಲಸದ ಮೂಲಕ ಉತ್ತರ ಕೊಡುತ್ತಾರೆ. ಅವರದ್ದು ಕೆಲಸ ಮಾಡುವ ಕ್ರಿಯಾತ್ಮಕ ಚಳವಳಿ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಈಗಾಗಲೇ ಆರ್‌ಎಸ್‌ಎಸ್ ನಿಲುವಿನ ಬಗ್ಗೆ ಹಲವು ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಆರ್‌ಎಸ್‌ಎಸ್ ಅನ್ನು ವಿರೋಧಿಸಿದರೆ, ಇನ್ನೂ ಕೆಲವರು ಆರ್‌ಎಸ್‌ಎಸ್ ನಿಲುವುಗಳ ಬಗ್ಗೆ ಹೇಳಿಕೊಂಡು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆಯೇ ಶಾಸಕ ಎನ್. ಮಹೇಶ್ ಆರ್‌ಎಸ್‌ಎಸ್ ಕಾರ್ಯಕರ್ತರ ನಿಲುವುಗಳು, ಅವರ ಶ್ರದ್ಧೆ, ಶ್ರಮದ ಬಗ್ಗೆ ಚಾಮರಾಜನಗರದಲ್ಲಿ ಬಿಡಿಬಿಡಿಯಾಗಿ ಹೇಳಿದರು. ಕಾರ್ಯಕರ್ತು ಹೇಗೆಲ್ಲ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ತಮ್ಮ ದಾಟಿಯಲ್ಲೇ ಬಿಡಿಸಿ ಹೇಳಿದ್ದಾರೆ. ಕಾರ್ಯಕರ್ತರಲ್ಲಿ ಯಾವಾಗಲೂ ನಾಯಕತ್ವದ ಬಗ್ಗೆ ಮಾತುಗಳು ಬಂದಿಲ್ಲ ಎಂದರು.












Click it and Unblock the Notifications