ದೀಪಾವಳಿ ಜಾತ್ರೆಗೆ ಮಲೆ ಮಾದಪ್ಪನ ಬೆಟ್ಟ ಸಜ್ಜು: KRSTCಯಿಂದ 350 ಬಸ್‌ಗಳ ವ್ಯವಸ್ಥೆ, ದ್ವಿಚಕ್ರ ವಾಹನಗಳಿಗೆ ನಿಷೇಧ
ಚಾಮರಾಜನಗರ, ಅಕ್ಟೋಬರ್, 28: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 2ರವರೆಗೆ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ. ಇನ್ನೂ ಈ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಲಿರುವ ಹಿನ್ನೆಲೆ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೀಪಾವಳಿ ಜಾತ್ರಾ ಮಹೋತ್ಸವ ಅಕ್ಟೋಬರ್ 29ರಿಂದ ಪ್ರಾರಂಭ ಆಗಲಿದ್ದು, ಅಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಅಕ್ಟೋಬರ್ 30ರಂದು ದೀಪಾವಳಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು ನಡೆಯಲಿದೆ.

ಅಕ್ಟೋಬರ್ 31ರಂದು ಸ್ವಾಮಿಗೆ ವಿಶೇಷ ಸೇವೆ ಉತ್ಸವಗಳು ನಡೆಯಲಿದ್ದು ನವೆಂಬರ್ ಒಂದರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿದೆ. ನವೆಂಬರ್ 2 ರಂದು ಬೆಳಿಗ್ಗೆ ಮಹಾರಥೋತ್ಸವ ಜರುಗಲಿದ್ದು ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೊಂಡೋತ್ಸವ ಜರುಗಲಿದೆ.
ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿಗಳಿಗೆ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯದಲ್ಲಿ 10 ಕಡೆ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಬೆಟ್ಟದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದು ಬಾರಿಗೆ 1.5 ಸಾವಿರ ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಅಲ್ಲದೆ, ಹಳೆ ದಾಸೋಹ ಭವನದ ಬಳಿ ವಿಶೇಷ ದಾಸೋಹ ಕೇಂದ್ರ ತೆರೆದು ದಿನದ 24 ಗಂಟೆಯೂ ದಾಸೋಹ ಏರ್ಪಡಿಸಲಾಗುತ್ತದೆ.
ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಸುಮಾರು ಆರರಿಂದ ಏಳು ಲಕ್ಷದವರೆಗೆ ಲಾಡು ತಯಾರು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸುಮಾರು ಮೂರುವರೇ ಲಕ್ಷ ಲಾಡು ತಯಾರು ಮಾಡಿ ಸಂಗ್ರಹ ಮಾಡಲಾಗಿದೆ.
ರಾಜಗೋಪುರದ ಎಡ ಹಾಗೂ ಬಲಭಾಗದಲ್ಲಿ ನೆರಳಿನ ವ್ಯವಸ್ಥೆ, ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳದಲ್ಲಿ ಹಾಗೂ ದಾಸೋಹ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಲಾಗಿದೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶೌಚಾಲಯದ ಜೊತೆಗೆ ತಾಳು ಬೆಟ್ಟದಲ್ಲಿ 5 ಹಾಗೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಬೈಲ್ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ, ದೇವಸ್ಥಾನದ ಆವರಣ ಹಾಗೂ ಜನಸಂದಣಿ ಇರುವ ಕಡೆ ಟ್ಯಾಂಕ್ ಮೂಲಕ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳು ಶುದ್ಧ ಕುಡಿಯುವ ನೀರನ್ನು ಕೇವಲ ಕುಡಿಯಲು ಮಾತ್ತರ ಬಳಸಬೇಕೆಂದು ಪ್ರಾಧಿಕಾರದ ಸಿಬ್ಬಂದಿ ಮನವಿ ಮಾಡಿದ್ದಾರೆ.
ದೇವಸ್ಥಾನದ ರಾಜಗೋಪುರ ಮುಂಭಾಗ ಹಾಗೂ ಅತಿಥಿ ಗಣ್ಯರ ಮುಖ್ಯದ್ವಾರ ರಂಗಮಂದಿರ ಹಾಗೂ ಭಕ್ತಾದಿಗಳು ಜನಸಂದಣಿ ಇರುವ ಕಡೆ ಸ್ವಚ್ಛತಾ ಕಾಪಾಡಲು ಹೆಚ್ಚು ಪೌರಕಾರ್ಮಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇನ್ನು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಎಸ್ಆರ್‌ಟಿಸಿಯಿಂದ 350 ಬಸ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟು ನಿಂತರೆ, ದುರಸ್ತಿ ಪಡಿಸಲು 50 ಜನ ತಾಂತ್ರಿಕ ಸಿಬ್ಬಂದಿಯನ್ನೂ ಸಹ ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ತಿಳಿಸಿದ್ದಾರೆ.
ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ರಾಜಗೋಪುರದ ಮಹಾದ್ವಾರದ ಬಳಿ ಪ್ರತ್ಯೇಕ ಕ್ಯೂ ಲೈನ್, 60 ವರ್ಷ ಮೇಲ್ಪಟ್ಟವರಿಗೆ ಆಲಂಬಾಡಿ ಬಸವೇಶ್ವರ ಸ್ವಾಮಿಯ ಸಮೀಪ ಪ್ರತ್ಯೇಕ ಕ್ಯೂ ಲೈನ್, ಅತಿಥಿ ಗಣ್ಯರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವಿಚಕ್ರ ವಾಹನ ನಿರ್ಬಂಧ: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ದ್ವಿಚಕ್ರ ವಾಹನದಲ್ಲಿ ಆಗಮಿಸುವ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಲಿದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ಅಕ್ಟೋಬರ್ 29ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 2ರ ಸಂಜೆ 6 ಗಂಟೆಯವರೆಗೆ ಶ್ರೀ ಕ್ಷೇತ್ರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಧ ವಿಧಿಸಲಾಗಿದೆ.
ದ್ವಿಚಕ್ರ ವಾಹನ ದಲ್ಲಿ ಹೋಗುವ ಭಕ್ತಾದಿಗಳಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ಕೆಎಸ್ಆರ್‌ಟಿಸಿ ಬಸ್ ಮುಖಾಂತರ ಶ್ರೀ ಕ್ಷೇತ್ರಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಸೂಕ್ತ ಪೊಲೀಸ್ ಬಂದೋಬಸ್ತ್: ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಡಿವೈಎಸ್ಪಿ, 7 ಇನ್ಸ್‌ಪೆಕ್ಟರ್, 34 ಎಸ್ಐ, 52 ಎಎಸ್‌ಐ, 227 ಪೇದೆಗಳು 38 ಮಹಿಳಾ ಪೇದೆಗಳು, 238 ಗೃಹ ರಕ್ಷಕ ದಳದ ಸಿಬ್ಬಂದಿ, 3 ಡಿಆರ್, 1 ಕೆಎಸ್ಆರ್‌ಪಿ ವಾಹನದ ಸಿಬ್ಬಂದಿ ನಿಯೋಜಿಸಲಾಗಿದೆ.












Click it and Unblock the Notifications