ಕೇವಲ 27 ದಿನಕ್ಕೆ 2.43 ಕೋಟಿ ಒಡೆಯನಾದ ಮಲೆ ಮಾದಪ್ಪ; ಆದಾಯದ ಮೂಲ ಯಾವುವು?
ಚಾಮರಾಜನಗರ, ನವೆಂಬರ್, 21: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲ ಕೂಡ ಒಂದಾಗಿದೆ. ಈ ದೇವಸ್ಥಾಬದ ಹುಂಡಿ ಹಣ ಎಣಿಕೆ ಬುಧವಾರ ನಡೆದಿದ್ದು, ಬರೋಬ್ಬರಿ 2.43 ಕೋಟಿ ಹಣ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಮೂಲಗಳು ಯಾವುವು ಎಂದು ಇಲ್ಲಿ ತಿಳಿಯಿರಿ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಬುಧವಾರ (ನವೆಂಬರ್ 20) ಬೆಳಗ್ಗೆ 6.30ಕ್ಕೆ ಆರಂಭಗೊಂಡು ಸಂಜೆ 7 ಗಂಟೆಗೆ ಮುಕ್ತಾಯವಾಗಿದೆ. ಬರೀ 27 ದಿನಗಳ ಅವಧಿಯಲ್ಲಿ ಬರೋಬ್ಬರಿ 2,43,65,775 ರೂಪಾಯಿ ಹಣ ಸಂಗ್ರಹವಾಗಿದೆ.

ಭಕ್ತರು ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿಯನ್ನು ಅರ್ಪಿಸಿದ್ದು, ಹುಂಡಿಯಲ್ಲಿ 5 ದೇಶಗಳ ಕರೆನ್ಸಿ ಪತ್ತೆಯಾಗಿದೆ. ದೀಪಾವಳಿ ಜಾತ್ರೆ ಹಿನ್ನೆಲೆ ಲಕ್ಷಾಂತರ ಮಂದಿ ಭಕ್ತರ ಕ್ಷೇತ್ರಕ್ಕೆ ಬಂದಿದ್ದರು. ಈ ಹಿನ್ನೆಲೆ ಕೇವಲ 27 ದಿನಗಳಿಗೆ 2.4 ಕೋಟಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ನೂತನ ತಂತ್ರಜ್ಞಾನದ ಕ್ಯಾಮರಾಗಳ ಅಳವಡಿಕೆ: ಪ್ರಸಿದ್ಧ ಯಾತ್ರ ಸ್ಥಳಗಳಲ್ಲೊಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ತಂತ್ರಜ್ಞಾನದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಭಕ್ತರ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಹಾಗಾದರೆ ಯಾವ್ಯಾವ ಸ್ಥಳಗಳಲ್ಲಿ ಅಳವಡಿಕೆ ಮಾಡಲಾಗಿದೆ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರ ದೇವಾಲಯದ ಹೊರಾಂಗಣ, ರಂಗ ಮಂದಿರ, ವಿಶೇಷ ಪ್ರವೇಶ ದ್ವಾರ, ಪಾಲಾರ್ ರಸ್ತೆ, ಕೊಳ್ಳೇಗಾಲ ರಸ್ತೆಗಳಲ್ಲಿ ವಿನೂತನ ಮಾದರಿಯ ಕೌಂಟಿಂಗ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸಿ.ಸಿ ಕ್ಯಾಮರಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹಾಗೂ ಪ್ರತಿಯೊಂದು ವಾಹನಗಳನ್ನು ಸ್ಕ್ಯಾನ್ ಮಾಡಲಿದೆ.
ಶ್ರೀ ಕ್ಷೇತ್ರದಲ್ಲಿ ಕಳ್ಳತನ ತಡೆಯುವ ನಿಟ್ಟಿನಲ್ಲಿ ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ವಿನೂತನ ಮಾದರಿಯ ಕೌಂಟಿಂಗ್ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಒನ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ಪವಾಡ ಪುರುಷ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ-ವಿಧಾನಗಳೊಂದಿಗೆ ಸಂಪ್ರದಾಯದಂತೆ ನೆರವೇರಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ತಿಕ ಮಾಸದ ಎರಡನೇ ಸೋಮವಾರ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತ್ರತ್ವದಲ್ಲಿ ನಡೆಯಿತು. ಬೇಡಗಂಪಣ ಸರದಿ ಅರ್ಚಕರ ಅಧ್ಯಕ್ಷತೆಯಲ್ಲಿ ಮಹದೇಶ್ವರನಿಗೆ ಮುಂಜಾನೆಯಿಂದಲೇ ಬಿಲ್ವಪತ್ರೆ, ಹಾಲು-ಮೊಸರು ಸೇರಿದಂತೆ ಇನ್ನಿತರ ಅಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮಗಳು, ದೂಪದ ಸೇವೆ, ಮಹಾಮಂಗಳಾರತಿ ಸಂಭ್ರಮ ಸಡಗರದಿಂದ ನಡೆಯಿತು.












Click it and Unblock the Notifications