ಕೊಳ್ಳೇಗಾಲದಲ್ಲಿ ಚಿರತೆ ಪ್ರತ್ಯಕ್ಷ: ಜನರು, ವಿದ್ಯಾರ್ಥಿಗಳಿಗೆ ಆತಂಕ
ಚಾಮರಾಜನಗರ, ಜುಲೈ, 03: ಚಿರತೆ ಪ್ರತ್ಯಕ್ಷವಾಗಿ ಜನರು, ವಿದ್ಯಾರ್ಥಿಗಳು ಆತಂಕಕ್ಕೀಡಾದ ಘಟನೆ ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಸೇತುವೆ ಬಳಿ ನಡೆದಿದೆ.
ಮುಡಿಗುಂಡ ಸೇತುವೆ ಸಮೀಪದ ಶಂಕನಪುರ ತೆರಳುವ ರಸ್ತೆ ರೇಷ್ಮೆ ಇಲಾಖೆ ವಸತಿಗೃಹಗಳ ಬಳಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಆರ್‌ಎಫ್‌ಒ ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿರತೆ ಕಾಣಿಸಿಕೊಂಡ ಪ್ರದೇಶಕ್ಕೆ ರೇಷ್ಮೆ ಇಲಾಖೆ ವಸತಿಗೃಹದ ನಿವಾಸಿಗಳು ಹಾಗೂ ಅಕ್ಕಪಕ್ಕದಲ್ಲಿ ಇರುವ ಐಟಿಐ ಕಾಲೇಜು, ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು ಸಂಜೆ ವೇಳೆ ಯಾರು ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ
ರೇಷ್ಮೆ ವಸತಿ ಗೃಹದ ಶಂಕನಪುರಕ್ಕೆ ತೆರಳುವ ರಸ್ತೆಯ ತಿರುವಿನಲ್ಲಿ ಚಿರತೆ ಕುಳಿತಿರುವುದನ್ನು ಮಾರುಕಟ್ಟೆಗೆ ರೇಷ್ಮೆ ತೆಗೆದುಕೊಂಡು ಹೋಗುವ ರೈತರ ನೋಡಿ ಆ ರಸ್ತೆಯಲ್ಲಿ ಬರುತ್ತಿದ್ದ ಮುಡಿಗುಂಡ ನಿವಾಸಿಗಳಾದ ಸಂಜಯ್ ಕುಮಾರ್ ಮತ್ತು ಚಂದ್ರು ಎಂಬುವರಿಗೆ ಇಲ್ಲಿ ಚಿರತೆ ಇದೆ ಎಂದು ಹೇಳಿ ಅವರು ವಾಪಸ್ ಹೋದರು.
ಈ ವೇಳೆ ಸಂಜಯ್ ಮತ್ತು ಚಂದ್ರು ಹೋಗಿ ನೋಡಿದಾಗ ಚಿರತೆ ರಸ್ತೆ ದಾಟಿ ಕಬ್ಬಿನ ಗದ್ದೆಗೆ ತೆರಳಿರುವುದನ್ನು ಕಂಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಐಟಿಐ ಕಾಲೇಜು, ಆದರ್ಶ ಶಾಲೆ ಇದ್ದು, ವಿದ್ಯಾರ್ಥಿಗಳಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಚಿರತೆ ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಗುಂಪಿನ ಸದಸ್ಯೆಯನ್ನು ಬಿಟ್ಟು ಹೋಗದ ಆನೆ ಹಿಂಡು: ಗುಂಪಿನಲ್ಲಿದ್ದ ಹೆಣ್ಣಾನೆಯೊಂದು ಮೃತಪಟ್ಟು ಉಳಿದ ಆನೆಗಳು ಕಳೇಬರ ಬಿಟ್ಟು ಕದಲದಿರುವ ಘಟನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಗೆ ಒಳಪಡುವ ಕೊಳ್ಳೇಗಾಲ ತಾಲೂಕಿನ ಮತ್ತಿಪುರದ ಬಳಿ ನಡೆದಿದೆ.
ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ಕಳೆಬರದ ಬಳಿ ಯಾರೂ ಸುಳಿಯಂತೆ ಕಾಡಾನೆಗಳು ಕಾವಲಿಗಿದ್ದು, ಬುಧವಾರ ಬೆಳಗ್ಗೆಯಿಂದಲೂ ಯಾರನ್ನೂ ಕಳೇಬರದತ್ತ ಬಿಡದೇ ಮರುಗುತ್ತಿವೆ. ಮೃತ ಕಳೇಬರದ ಸುತ್ತ ಕಾಡಾನೆಗಳು ನಿಂತು ಘೀಳಿಟ್ಟುತ್ತಿರುವ ಪರಿಣಾಮ ಅರಣ್ಯ ಇಲಾಖೆ ಸಿಬ್ಬಂದಿ ಮೃತ ಹೆಣ್ಣಾನೆ ಬಳಿ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತ ಹೆಣ್ಣಾನೆ ಬಳಿ ಮರಿಯಾನೆಯೂ ಇದ್ದು, ಯಾವ ಕಾರಣದಿಂದ ಮೃತಪಟ್ಟಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದ್ದಾರೆ.












Click it and Unblock the Notifications