ಕಾವೇರಿ ಹೊರಹರಿವು ಹೆಚ್ಚಳ: ಮುಳುಗಿದ ಕೊಳ್ಳೇಗಾಲ ತಾಲ್ಲೂಕಿನ ಈ ಗ್ರಾಮಗಳು
ಚಾಮರಾಜನಗರ, ಆಗಸ್ಟ್, 01: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಅವಾಂತರಗಲೇ ಸೃಷ್ಟಿಯಾಗಿವೆ. ಹಾಗೆಯೇ ಕಾವೇರಿ ಆರ್ಭಟದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ನದಿಪಾತ್ರದ ಗ್ರಾಮಗಳು ತತ್ತರಿಸುತ್ತಿದ್ದು, 5 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, 2 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ.
ಕೊಳ್ಳೇಗಾಲದ ನದಿಪಾತ್ರದ ಗ್ರಾಮಗಳಾದ ಅಣಗಳ್ಳಿ, ದಾಸನಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಾವೇರಿ ನದಿ ಭಾರೀ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದ್ದು, ದಾಸನಪುರ, ಅಣಗಳ್ಳಿ, ಹಂಪಾಪುರ, ಹರಳೆ, ಮುಳ್ಳೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು ಸ್ಥಳಕ್ಕೆ ಡಿಸಿ ಶಿಲ್ಪಾನಾಗ್ ಭೇಟಿ ಕೊಟ್ಟು ಪ್ರವಾಹ ನಿರ್ವಹಣೆ ಮಾಡುತ್ತಿದ್ದಾರೆ. ಕೊಳ್ಳೇಗಾಲದ ಶಿವನಸಮುದ್ರ ಸಮೀಪವಿರುವ ಐತಿಹಾಸಿಕ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ. 2019ರಲ್ಲೂ ಭೀಕರ ಮಳೆಗೆ ವೆಸ್ಲಿ ಸೇತುವೆ ಒಂದು ಭಾಗ ಕೊಚ್ಚಿ ಹೋಗಿತ್ತು. ಬಳಿಕ, ದುರಸ್ತಿ ಮಾಡಲಾಗಿತ್ತು. ಈಗ, ಸೇತುವೆಯ ಮತ್ತೊಂದು ಭಾಗ ನೀರುಪಾಲಾಗಿದೆ.
ದುರಂತದಲ್ಲಿ ಪಾರಾಗಿ ಬಂದ ಕನ್ನಡತಿ ರಾಧಾ: ಕೇರಳ ಮಹಾ ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿ ಮೂಲದ ರಾಧಾ ಈಗಲೂ ಆ ಘಟನೆಯನ್ನು ನೆನೆದು ಬೆಚ್ಚಿ ಬೀಳುತ್ತಾರೆ, ಬಿಕ್ಕಳಿಸುತ್ತಾರೆ.
ಮಗಳ ಶಾಲಾ ದಾಖಲಾತಿಗೆ ಸಮಸ್ಯೆ ಉಂಟಾದ್ದರಿಂದ ಮೂಲತಃ ಕೇರಳದವರಾದ ರಾಧಾ ಚೂರಲ್ ಮಲೆಗೆ ತೆರಳಿ ಮಹಾ ಪ್ರಳಯಕ್ಕೆ ಸಿಲುಕಿ ಬಚಾವ್ ಆಗಿ ಬಂದಿದ್ದಾರೆ. ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದಾರೆ.
ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ 2 ದಿನ ನರಕ ನೋಡಿ ಬಂದಿದ್ದಾರೆ. ರಾತ್ರಿ ಶುರುವಾದ ಜೋರು ಮಳೆಯಿಂದ ಬಚಾವ್ ಆಗಲು ಬೆಟ್ಟ ಏರಿದೆವು. 10 ನಿಮಿಷದಲ್ಲೇ ಎಲ್ಲವೂ ನಾಶವಾಯಿತು. ಆಸ್ಪತ್ರೆ ಕಟ್ಟಡವೊಂದು ಬಿಟ್ಟರೇ ಏನೂ ಉಳಿದಿರಲಿಲ್ಲ. ನನ್ನ ಮಗಳ ಶಾಲಾ ದಾಖಲಾತಿಗಾಗಿ ಕೆಲವು ದಾಖಲೆಗಳನ್ನು ತರಲು ಬಂದಿದ್ದೆ. ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ಹೊತ್ತಿಗೇ ಅದರ ಅವಶೇಷವೇ ಇರಲಿಲ್ಲ ಎಂದು ಕಣ್ಣೀರಾದರು.
ಗುಡ್ಡದ ಮೇಲೆ ಇದ್ದರೂ, ಅದೊಂದು ರೀತಿ ನರಕವೇ ಆಗಿತ್ತು. ಒಬ್ಬರಿಗೆ ಕೈ ಇಲ್ಲ, ತಲೆ ಇರಲಿಲ್ಲ. ಮನೆಯಲ್ಲಿ ಉಳಿದಿದ್ದ ಒಂದೇ ಗೋಡೆಯನ್ನು ಹಿಡಿದು ತಾಯಿ-ಮಗು ಬದುಕಿದ್ದರು. ಆ ದೃಶ್ಯ ನೋಡುವುದು ಯಾರಿಗೂ ಬೇಡ ಎಂದರು.
ಜಾತಿ ಪ್ರಮಾಣಪತ್ರದಲ್ಲಿ ಉಂಟಾಗಿರುವ ದೋಷ ಸರಿಪಡಿಸಿ, ನನ್ನ ಮಗಳಿಗೆ ಶಾಲಾ ದಾಖಲಾತಿ ಕೊಡಿಸಬೇಕು ಎಂದು ರಾಧಾ ಮನವಿ ಮಾಡಿದ್ದಾರೆ. ಎರಡು ದಿನ ತಾವು ಕಂಡ ನರಕದ ದೃಶ್ಯದಿಂದ ಇನ್ನೂ ಚೇತರಿಸಿಕೊಳ್ಳದ ರಾಧಾ ಸದ್ಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.












Click it and Unblock the Notifications