V Somanna: 'ಮುಂದಿನ ಮುಖ್ಯಮಂತ್ರಿ' ಎಂಬ ಅಭಿಮಾನಿಗಳ ಮಾತು ಕೇಳಿ ವಿ. ಸೋಮಣ್ಣ ಹೇಳಿದ್ದೇನು?

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಬಿಂದುವಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ಕಣಕ್ಕಿಳಿದಿದ್ದಾರೆ. ವಿಪಕ್ಷ ನಾಯಕನನ್ನು ಸೋಲಿಸಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್, ಸಿದ್ದರಾಮಯ್ಯ ವಿರುದ್ಧ ಪ್ರಬಲ ಲಿಂಗಾಯತ ಸಮುದಾಯದ ವಿ. ಸೋಮಣ್ಣರನ್ನು ಹುರಿಯಾಳಾಗಿಸಿದೆ.

Karnataka Elections 2023: V Somanna Reaction On Fans Slogan Next Chief Minister

ವರುಣಾ ಕ್ಷೇತ್ರದ ಜೊತೆಗೆ ಚಾಮರಾಜನಗರ ಕ್ಷೇತ್ರದಿಂದಲೂ ವಿ. ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ. ಪುಟ್ಟರಂಗಶೆಟ್ಟಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ವಿ. ಸೋಮಣ್ಣ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಗುರುವಾರ, ಏಪ್ರಿಲ್ 20ರಂದು ಚಾಮರಾಜನಗರದಲ್ಲಿ ಪ್ರಚಾರ ಕೈಗೊಂಡಿದ್ದ ವಿ. ಸೋಮಣ್ಣ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು "ಮುಂದಿನ ಸಿಎಂ ಸೋಮಣ್ಣ' ಎಂಬ ಘೋಷಣೆಗಳ ಮೂಲಕ ಹುರಿದುಂಬಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, "ನಾನು ಮುಂದಿನ ಮುಖ್ಯಮಂತ್ರಿ ಎಂಬ ಅಭಿಮಾನಿಗಳ ಆಶಯ ಕೇಳಿ ಸಂತೋಷವಾಗುತ್ತದೆ, ಮತ್ತೊಂದು ಕಡೆ ನೋವು ಆಗುತ್ತದೆ," ಎಂದು ಹೇಳಿದರು.

Karnataka Elections 2023: V Somanna Reaction On Fans Slogan Next Chief Minister

"ಅಭಿಮಾನಿಗಳು ಮುಂದಿನ ಸಿಎಂ ಸೋಮಣ್ಣ ಎಂದು ಹೇಳಿ, ನನಗೆ ಶತ್ರುಗಳನ್ನು ಹೆಚ್ಚಿಸಬೇಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸುತ್ತಾರೆ,'' ಎಂದು ತಿಳಿಸಿದರು.

ಇನ್ನು ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಸಮುದಾಯ ಮತ್ತು ನಾಯಕರನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ವಿ. ಸೋಮಣ್ಣ, "ಬಿಜೆಪಿಯಲ್ಲಿ ಲಿಂಗಾಯತರನ್ನು ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿಲ್ಲ ಮತ್ತು ಆ ಸಂದರ್ಭ ಯಾವತ್ತೂ ಬರುವುದಿಲ್ಲ. ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ," ಎಂದು ವಾಗ್ದಾಳಿ ನಡೆಸಿದರು.

"ವೀರಶೈವ ಲಿಂಗಾಯತ ಸಮುದಾಯಕ್ಕೆ ಸಮಸ್ಯೆಯಾದರೆ ಏನು ಮಾಡಬೇಕೆಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಮಾಡಿ ಚರ್ಚಿಸಿದ್ದೇವೆ. ಈ ಹಿಂದೆ ವೀರೇಂದ್ರ ಪಾಟೀಲ್ ಮತ್ತು ಎಸ್. ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ರಾಜ್ಯದ ಜನರ ಗಮನಕ್ಕೆ ತರುತ್ತೇವೆ. ಕಾಂಗ್ರೆಸ್‌ನವರು ಗಂಟೆಗೊಂದು ವಿವಾದ ಸೃಷ್ಟಿಸುತ್ತಾರೆ, ಇದು ಚುನಾವಣೆ ಹಾಗೂ ಬಿಜೆಪಿ ಗೆಲುವಿನ ಮೇಲೆ ಯಾವ ಪರಿಣಾಮ ಬೀರುವುದಿಲ್ಲ," ಎಂದು ವಿ. ಸೋಮಣ್ಣ ತಿಳಿಸಿದರು.

Karnataka Elections 2023: V Somanna Reaction On Fans Slogan Next Chief Minister

2018ರ ವಿಧಾನಸಭೆ ಚುನಾವಣೆ ವೇಳೆ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿ ವಿ. ಸೋಮಣ್ಣ ಗೆಲುವು ಸಾಧಿಸಿದ್ದರು. ಈ ಬಾರಿ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅವರದೇ ಕ್ಷೇತ್ರದಲ್ಲಿ ಕಟ್ಟಿಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸುವ ದಿನಾಂಕ ಏಪ್ರಿಲ್ 20ಕ್ಕೆ ಮುಕ್ತಾಯವಾಗಿದ್ದು, ಶುಕ್ರವಾರ, ಏಪ್ರಿಲ್ 22ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ.

ಇನ್ನು ಮೇ 10ರಂದು ಕರ್ನಾಟಕದ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+