ಮುಂದುವರೆದ ಭಾರೀ ಮಳೆ: ಕಬಿನಿ ಜಲಾಶಯದ ಹೊರಹರಿವು ಹೆಚ್ಚಳ, ಮೈದುಂಬಿ ಧುಮ್ಮಿಕ್ಕುತ್ತಿರುವ ಭರಚುಕ್ಕಿ ಫಾಲ್ಸ್
Bharachukki Waterfalls: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ನದಿ, ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂದೆಡೆ ಕೆಲವು ಪ್ರಮುಖ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ, ಮುಂಜಾಗ್ರತಾ ಕ್ರಮವಾಗಿ ನೀರನ್ನು ಹೊರಹರಿಸಲಾಗುತ್ತಿದೆ. ಹಾಗೆಯೇ ಕಬಿನಿ ಹೊರಹರಿವು ಹೆಚ್ಚಳ ಹಿನ್ನೆಲೆ ಭರಚುಕ್ಕಿ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿದೆ.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಭರಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.

ಸೋಮವಾರ (ಜುಲೈ 15) ಮಧ್ಯಾಹ್ನ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕುವ ದೃಶ್ಯ ವೈಭವವು ನೋಡುಗರನ್ನು ರೋಮಾಂಚನಗೊಳಿಸಿತು. ಕಬಿನಿಯಿಂದ 20,000 ಕ್ಯೂಸೆಕ್ ಹೊರಹರಿವು ಇದ್ದು, ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಪ್ರಮುಖ ಸೂಚನೆಗಳು: ಕದ್ರಾ ಜಲಾಶಯವೂ ಕೂಡ ಭರ್ತಿಯಾಗುವ ಹಂತವನ್ನು ತಲುಪಿರುವ ಹಿನ್ನೆಲೆ ಈ ಭಾಗದ ಸುತ್ತಮುತ್ತಲಿನ ಜನರಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಈ ಭಾಗದ ಹಳ್ಳ-ಕೊಳ್ಳ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಜಲಾನಯನ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಇನ್ನು ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರ್‌ಗಳಾಗಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟವು 29.70 ಮೀಟರ್ ತಲುಪಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 30,000 ಕ್ಯೂಸೆಕ್ಸ್ ಆಗಿರುರುವುದರಿಂದ ಈ ಭಾಗದ ಜನರಿಗೆ ಪ್ರವಾದ ಭೀತಿ ಶುರುವಾಗಿದೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಕದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಈ ಮಳೆಗಾಲದ ಅವಧಿಯಲ್ಲಿ ಜಲಾಶಯದ ಮಟ್ಟವು ಏರಿಕೆಯಾದಗಲೆಲ್ಲ ಯಾವುದೇ ಸಮಯದಲ್ಲಾದರೂ ನೀರನ್ನು ಹೊರಗಡೆ ಬಿಡಲಾಗುವುದು.
ಆದ್ದರಿಂದ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಅಣೆಕಟ್ಟೆಯ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಈ ಮೂಲಕ ಕೋರಲಾಗಿದೆ. ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಸಡೆಸದಂತೆ ಸೂಚನೆ ನೀಡಲಾಗಿದೆ.












Click it and Unblock the Notifications