ಬ್ರಿಟೀಷರಿಗೂ ಪ್ರಿಯವಾಗಿತ್ತಂತೆ ಬಂಡೀಪುರ, ಇಲ್ಲಿರುವ ಬ್ರಿಟೀಷರ ಅತಿಥಿ ಗೃಹದ ಬಗ್ಗೆ ನಿಮಗೆಷ್ಟು ಗೊತ್ತು?
ಚಾಮರಾಜನಗರ, ಜನವರಿ 11: ಬಂಡೀಪುರ ರಾಷ್ಟ್ರೀಯ ಉದ್ಯಾನವು ಹುಲಿಸಂರಕ್ಷಣಾ ಅರಣ್ಯವಾಗಿದ್ದು, ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದ್ದು, ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದಲ್ಲದೆ, ಸಫಾರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಬ್ರಿಟೀಷರಿಗೂ ಈ ಅರಣ್ಯ ಪ್ರಿಯವಾಗಿತ್ತು ಎಂಬುದಕ್ಕೆ ಇಲ್ಲಿರುವ ಬ್ರಿಟೀಷರ ಕಾಲದ ಅತಿಥಿ ಗೃಹ ಸಾಕ್ಷಿಯಾಗಿದೆ.
ಈ ಬಾರಿ ನಿನ್ನೆಮೊನ್ನೆ ತನಕವೂ ಮಳೆ ಸುರಿದ ಕಾರಣದಿಂದ ಬಂಡೀಪುರ ಹಸಿರಾಗಿದೆ. ಹೀಗಾಗಿ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ತುಂಬಿದ ನಿಸರ್ಗ.. ಅಲ್ಲಲ್ಲಿ ಹಾದು ಹೋಗುವ ಕಾಡಾನೆಗಳು.. ಘರ್ಜಿಸುವ ಹುಲಿಗಳು.. ಗುಂಪುಗುಂಪಾಗಿ ಓಡುವ ಜಿಂಕೆ, ಸಾರಂಗಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈಗಾಗಲೇ ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಬಂದು ಹೋಗಿದ್ದು, ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಾಲು ಸಾಲು ರಜೆಗಳಿರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆಯಿದೆ.

ಬಂಡೀಪುರ ಹುಲಿಗಳ ಆವಾಸ ಸ್ಥಾನ. ಇವುಗಳನ್ನು ಹೊರತು ಪಡಿಸಿದರೆ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಕಾಣಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಛಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದ ನಂತರ ಇಲ್ಲಿ ಹಲವು ಬಗೆಯ ಪ್ರಾಣಿಗಳು ಕಾಣಸಿಗುತ್ತವೆ. ಸಸ್ಯಹಾರಿಗಳಿಂದ ಹಿಡಿದು ಮಾಂಸಹಾರಿ ಪ್ರಾಣಿಗಳ ತನಕ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ಇಲ್ಲಿರುವುದರಿಂದ ಅವುಗಳನ್ನು ನೋಡುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ.
ಮೂಲೆಹೊಳೆ ಚಮ್ಮನಹಳ್ಳದಲ್ಲಿರುವ ಬಂಗಲೆ
ಇತ್ತೀಚೆಗಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಫಾರಿಯಲ್ಲಿ ಕಂಡು ಬಂದ ದೃಶ್ಯಗಳನ್ನು ಸೆರೆ ಹಿಡಿದು ಪೋಸ್ಟ್ ಮಾಡುವುದು ಜನಪ್ರಿಯವಾಗುತ್ತಿದ್ದು, ಇದಕ್ಕಾಗಿಯೇ ಬರುವವರು ಇದ್ದಾರೆ. ಜೊತೆಗೆ ಬಂಡೀಪುರದ ಸುಂದರ ದೃಶ್ಯಗಳನ್ನು ನೋಡಿದವರು ಮತ್ತು ಅರಣ್ಯದಲ್ಲಿ ರಸಮಯ ಕ್ಷಣಗಳನ್ನು ಕಳೆದವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದರಿಂದಾಗಿ ಜನ ಆಕರ್ಷಣೆಗೊಂಡು ಇತ್ತ ಬರುತ್ತಿದ್ದಾರೆ. ಜತೆಗೆ ವಿದೇಶಿಗರು ಇತ್ತ ಧಾವಿಸುತ್ತಿರುವುದು ಬಂಡೀಪುರದ ಖ್ಯಾತಿಗೆ ಹಿಡಿದ ಕನ್ನಡಿಯಾಗಿದೆ.
ಇದೆಲ್ಲದರ ನಡುವೆ ಬ್ರಿಟೀಷರು ಕೂಡ ಬಂಡೀಪುರ ಅರಣ್ಯದ ಸೌಂದರ್ಯವನ್ನು ಇಷ್ಟಪಟ್ಟಿದ್ದರು. ಅರಣ್ಯದಲ್ಲಿ ಉಳಿದುಕೊಳ್ಳುವ ಸಲುವಾಗಿಯೇ ಬಂಗಲೆಯನ್ನು ನಿರ್ಮಿಸಲಾಗಿತ್ತು. ಇವತ್ತಿಗೂ ಆ ಬಂಗಲೆ ಇರುವುದು ವಿಶೇಷವಾಗಿದೆ. ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿ ಈ ಬಂಗಲೆಯಿದ್ದು, ಶತಮಾನವನ್ನು ಪೂರೈಸಿದ ಖ್ಯಾತಿಗೆ ಪಾತ್ರವಾಗಿದೆ.

1917ರಲ್ಲಿ ನಿರ್ಮಿಸಲಾದ ಅತಿಥಿ ಗೃಹ
ಈ ಅತಿಥಿಗೃಹವನ್ನು 1917ರಲ್ಲಿ ಕಲ್ಲು, ಇಟ್ಟಿಗೆ, ಗಾರೆಯಿಂದ ನಿರ್ಮಿಸಲಾಗಿದ್ದು, ಮಂಗಳೂರು ಹೆಂಚಿನ ಛಾವಣಿ ಹೊಂದಿದೆ. ಈ ಕಟ್ಟಡ ಅಂದಿನ ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ಊಟಿಗೆ ತೆರಳಿ ಮೈಸೂರಿಗೆ ಹಿಂತಿರುಗುವಾಗ ವಿಶ್ರಾಂತಿ ಪಡೆಯಲು ಅನುಕೂಲವಾಗಲೆಂದು ಕಟ್ಟಿದರೆಂಬುದು ಇತಿಹಾಸ ಹೇಳುವ ಕಥೆಯಾಗಿದೆ.
ಬ್ರಿಟೀಷರ ಕಾಲದಲ್ಲಿ ಈ ಕಟ್ಟಡ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತಲ್ಲದೆ, ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ಒಡೆಯರ್ ರಾತ್ರಿ ಇಲ್ಲಿ ತಂಗಿದ್ದು, ಮುಂಜಾನೆ ಈ ವ್ಯಾಪ್ತಿಯಲ್ಲಿ ಅಡ್ಡಾಡುವ ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಿದ್ದರು. ಸ್ವಾತಂತ್ರ್ಯಾ ನಂತರ ಅರಣ್ಯ ಇಲಾಖೆಯ ಅತಿಥಿಗೃಹವಾಗಿ ಮುಂದುವರೆಯಿತಲ್ಲದೆ, 2000ದಲ್ಲಿ ಈ ಅತಿಥಿಗೃಹದ ಮೇಲ್ಭಾಗದಲ್ಲಿ ವೀಕ್ಷಣಾಗೋಪುರ ನಿರ್ಮಿಸಲಾಯಿತು.
ಬಂಗಲೆಯಲ್ಲಿ ವೀಕ್ಷಣಾಗೋಪುರ ನಿರ್ಮಾಣ
ಈ ಗೋಪುರ ನಿರ್ಮಾಣದ ಬಳಿಕ ಕಾಡು ಪ್ರಾಣಿಗಳ ಚಲನವಲನ ವೀಕ್ಷಣೆಗೆ ಅನುಕೂಲವಾಯಿತಲ್ಲದೆ, ಇಲ್ಲಿಂದ ನಿಂತು ನೋಡಿದರೆ ಕೇರಳ, ಗೋಪಾಲಸ್ವಾಮಿಬೆಟ್ಟ, ಮೂಲೆಹೊಳೆ, ಬಂಡೀಪುರ ವಲಯದ ಅರಣ್ಯ ಪ್ರದೇಶ ಕಾಣುವುದರಿಂದ ಬೇಸಿಗೆಯಲ್ಲಿ ಕಾಡ್ಗಿಚ್ಚು ಕಾಣಿಸಿದರೆ, ವಲಯ ಪತ್ತೆ ಹಚ್ಚಿ ಬೆಂಕಿ ನಂದಿಸಲು ಅನುಕೂಲವಾಗುತ್ತಿತ್ತು.

ಬಂಡೀಪುರ ಹುಲಿಯೋಜನೆಗೆ ಸೇರಿರುವ ಈ ಅತಿಥಿಗೃಹದಲ್ಲಿ ತಂಗಲು ರಜಾದಿನಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಗಿಬೀಳುತ್ತಿದ್ದರು. ಇದಕ್ಕಾಗಿ ಮಂತ್ರಿಗಳಿಂದಲೂ ಪ್ರಭಾವ ಬೀರುತ್ತಿದ್ದರು. ಹೆಚ್ಚಿನವರು ಮೋಜು ಮಸ್ತಿ ಮಾಡುವ ಸಲುವಾಗಿ ಆಗಮಿಸುತ್ತಿದ್ದರು. ಇಂತಹವರನ್ನು ಸುರಕ್ಷಿತವಾಗಿ ಕರೆದೊಯ್ದು ವಾಪಸ್ ಕರೆತರುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊಡ್ಡತಲೆನೋವಾಗಿತ್ತು. ಜತೆಗೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಹನಗಳ ಸಂಚಾರ ಹಾಗೂ ಅತಿಥಿಗಳ ಗದ್ದಲದಿಂದ ವನ್ಯಜೀವಿಗಳು ತೊಂದರೆ ಎದುರಿಸುತ್ತಿದ್ದವು.
ಪಾರಂಪರಿಕ ಮಾನ್ಯತೆ ನೀಡಲು ಒತ್ತಾಯ
ಇಂತಹ ತೊಂದರೆಗಳನ್ನೆಲ್ಲ ಕಣ್ಣಾರೆ ಕಂಡ ಅರಣ್ಯಾಧಿಕಾರಿಗಳು ಅತಿಥಿಗೃಹಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಿದರು. ಹೀಗಾಗಿ ಜನರ ಗಲಾಟೆಯಿಲ್ಲದೆ ಅತಿಥಿಗೃಹ ಈಗ ಪ್ರಶಾಂತವಾಗಿದೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಹೊರತು ಪಡಿಸಿದರೆ ಇದರತ್ತ ಯಾರೂ ಸುಳಿಯುತ್ತಿಲ್ಲ. ಕಟ್ಟಡಕ್ಕೆ ಬೆಳಕಿನ ವ್ಯವಸ್ಥೆಗೆ ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಸಮೀಪದ ಕೆರೆಯ ಬಳಿ ಕೊಳವೆಬಾವಿಯಿಂದ ನೀರು ಒದಗಿಸಲಾಗಿದೆ.
ಅರಣ್ಯದ ನಡುವೆ ಮಳೆಗಾಳಿ, ಚಳಿಯ ಹೊಡೆತವನ್ನು ಸಹಿಸುತ್ತಾ ಬಂದಿರುವ ಈ ಕಟ್ಟಡಕ್ಕೆ ಈಗ ಶತಮಾನ ಪೂರೈಸಿದ ಸಂಭ್ರಮದಲ್ಲಿದೆ. ಇಂತಹ ಕಟ್ಟಡಕ್ಕೆ ಪಾರಂಪರಿಕ ಮಾನ್ಯತೆ ನೀಡಿದರೆ ಇದರ ಖ್ಯಾತಿ ಇನ್ನಷ್ಟು ಪಸರಿಸಬಹುದು ಎಂಬುದು ಕೆಲವರ ಆಗ್ರಹವಾಗಿದೆ. ಅದು ಏನೇ ಇರಲಿ ಬಂಡೀಪುರ ಅರಣ್ಯದ ನಡುವೆ ಇರುವ ಈ ಬಂಗಲೆ ನಿಜಕ್ಕೂ ಗತ ಇತಿಹಾಸ ಸಾರುವ ಪ್ರತೀಕವಾಗಿ ನಿಂತಿರುವುದು ಖುಷಿಯ ವಿಚಾರವಾಗಿದೆ.












Click it and Unblock the Notifications