ಗುಂಡ್ಲುಪೇಟೆ: ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಂಡು ಗಮನ ಸೆಳೆದ ಅರೇಪುರದ ವ್ಯಕ್ತಿ
ಚಾಮರಾಜನಗರ, ಮೇ, 15: ವಿಧಾನಸಭೆ ಚುನಾವಣೆ ಮುಗಿದರೂ ಕೂಡ ಬಿಸಿಲಿನ ತಾಪದಂತೆ ರಾಜಕೀಯದ ಕಾವು ಏರತೊಡಗಿದೆ. ಅಲ್ಲದೆ ಪ್ರಮುಖ ರಾಜಕೀಯ ನಾಯಕರ ಪರ ಅಭಿಮಾನಿಗಳು ಇನ್ನಿಲ್ಲದ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಅದೇ ರೀತಿ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಜಯಶಾಲಿ ಆಗಿದ್ದರಿಂದ ಕಾಂಗ್ರೆಸ್ ಅಭಿಮಾನಿಯೊಬ್ಬ ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ.
ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಜಿ.ಮೂರ್ತಿ ಎಂಬವವರು ಗಣೇಶ್ ಪ್ರಸಾದ್ ಅಭಿಮಾನಿ ಆಗಿದ್ದಾರೆ. ಮೊದಲ ಸ್ಪರ್ಧೆಯಲ್ಲೇ ಗಣೇಶ್ ಪ್ರಸಾದ್ ಗೆಲುವು ಕಂಡ ಹಿನ್ನೆಲೆಯಲ್ಲಿ ಸಂತೋಷಗೊಂಡ ಮೂರ್ತಿ ಅವರು ಹೀಗೆ ವಿಭಿನ್ನ ರೀತಿಯಲ್ಲಿ ಹೇರ್ ಕಟಿಂಗ್ ಮಾಡಿಸಿಕೊಂಡು ವಿಶೇಷ ಅಭಿಮಾನ ಮೆರೆದಿದ್ದಾರೆ. ಗ್ರಾಮದಲ್ಲಿ ಹಾಗೂ ಅವರು ಹೋದಡೆಯಲ್ಲೆಲ್ಲಾ ಹಸ್ತದ ಗುರುತಿನ ಈ ಹೇರ್ ಕಟಿಂಗ್ ಗಮನ ಸೆಳೆಯುತ್ತಿದೆ.

ಗೆಲುವಿನ ಬಳಿಕ ಶಾಸಕರ ಟೆಂಪಲ್ ರನ್
ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಬಹಿರಂಗವಾಗಿದೆ. ಜನಾಶೀರ್ವಾದ ಪಡೆದ ಬಳಿಕ ಭಗವಂತನ ಆಶೀರ್ವಾದ ಪಡೆಯಲು ನೂತನ ಶಾಸಕರು ದೇವರ ಮೊರೆ ಹೋಗಿದ್ದು ಕಾಲ್ನಡಿಗೆ, ದೇವರಿಗೆ ಮುಡಿ ಕೊಟ್ಟಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ, ಜೆಡಿಎಸ್‌ನ ಎಂ.ಆರ್.ಮಂಜುನಾಥ್ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ಮಡಿಗೆಯಲ್ಲಿ ತೆರಳಿ ದೇವರ ದರ್ಶನ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ. ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ನಿನ್ನೆ ರಾತ್ರಿ ಹಾಗೂ ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶಾಸಕನಾಗಿ ಆಯ್ಕೆಯಾದರೇ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದರ್ಶನ ಪಡೆಯುವುದಾಗಿ ಮಂಜುನಾಥ್ ಹರಕೆ ಹೊತ್ತಿದ್ದರು. ಅದರಂತೆ, ಗೆಲುವು ಸಾಧಿಸಿದ ದಿನವೇ ಬೆಂಬಲಿಗರೊಂದಿಗೆ ತೆರಳಿ ಮಾದಪ್ಪನಿಗೆ ನಮಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಗೆಲುವು ಸಿ.ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಶಾಸಕರ ಪುತ್ರ ಕುಸುಮರಾಜ್ ದೇವರಿಗೆ ಮುಡಿ ಕೊಟ್ಟಿದ್ದಾರೆ. ಸೋಮಣ್ಣ ಸ್ಪರ್ಧೆ ಬಳಿಕ ಚಾಮರಾಜನಗರ ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿತ್ತು, ಗೆಲ್ಲುವ ಉಮೇದಿನಲ್ಲಿ ಸೋಮಣ್ಣ ಇದ್ದರು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಮತದಾರ ಉಲ್ಟಾ ಮಾಡಿದ್ದು ಪುಟ್ಟರಂಗ ಶೆಟ್ಟಿ ಅವರಿಗೆ ಅನಾಯಸ ಗೆಲುವನ್ನು ತಂದುಕೊಟ್ಟಿದ್ದಾನೆ. ಹಿರಿತನ, ಉಪ್ಪಾರ ಸಮುದಾಯದ ಏಕೈಕ ಶಾಸಕ ಆಗಿರುವ ಪುಟ್ಟರಂಗ ಶೆಟ್ಟಿ ಸಚಿವರಾಗುವ ರೇಸ್‌ನಲ್ಲೂ ಇದ್ದಾರೆ.












Click it and Unblock the Notifications