ಮಲೆ ಮಾದಪ್ಪನ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಶುಭ ಸುದ್ದಿ-ಇಲ್ಲಿದೆ ಮಾಹಿತಿ
ಚಾಮರಾಜನಗರ, ಅಕ್ಟೋಬರ್, 16: ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಯಾತ್ರ ಸ್ಥಳವಾಗಿದೆ. ಇನ್ನು ಈ ತಾಣಕ್ಕೆ ತೆರಳುವವರು ಈಗ ನಾಗಮಲೆಗೂ ಕೂಡ ಹೋಗಬಹುದಾಗಿದೆ. ಹಾಗಾದರೆ ಯಾತ್ರಿಕರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ ಒಮ್ಮೆ ಕಣ್ಣಾಡಿಸಿ.
ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ನಾಗಮಲೆ ಶ್ರೀ ಕ್ಷೇತ್ರಕ್ಕೆ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಭಕ್ತಾದಿಗಳು ಇದರ ಸದ್ಬಳಕೆ ಮಾಡಿಕೊಂಡು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಬಹುದಾಗಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಬಹುತೇಕ ಭಕ್ತಾದಿಗಳು ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುವುದು ಸಂಪ್ರದಾಯವಾಗಿತ್ತು. ಜಾತ್ರಾ ಮಹೋತ್ಸವ, ಹಬ್ಬ-ಹರಿದಿನ ಸೇರಿದಂತೆ ಇನ್ನಿತರ ದಿನಗಳಲ್ಲಿ ಭಕ್ತಾದಿಗಳು ದಿನದ 24 ಗಂಟೆಯೂ ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದರು.
ಆದರೆ, ನಾಗಮಲೆ ಶ್ರೀ ಕ್ಷೇತ್ರಕ್ಕೆ ಹೋಗುವಾಗ ಹಾಗೂ ಬರುವಾಗ ಕಾಡು ಪ್ರಾಣಿಗಳ ದಾಳಿ ನಡೆಸಿದ ಪರಿಣಾಮ ಭಕ್ತಾದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.
ಕಾಡು ಪ್ರಾಣಿಗಳ ದಾಳಿ ಹಿನ್ನೆಲೆ ಕಳೆದ ಫೆಬ್ರವರಿ 5 ರಿಂದ ನಾಗಮಲೆ ಶ್ರೀ ಕ್ಷೇತ್ರಕ್ಕೆ ಜೀಪ್ ಹಾಗೂ ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಹಾಗೆಯೇ ಈ ಕ್ಷೇತ್ರಕ್ಕೆ ಹೂಗುವವರು ಇಲ್ಲಿ ನೀಡಲಾಗಿರುವ ಪ್ರಮುಖ ಮಾಹಿತಿಯನ್ನು ಗಮನಿಸಬೇಕಾಗುತ್ತದೆ.
ಈಗ ಪ್ರತಿದಿನ 200 ಮಂದಿಗೆ ಅವಕಾಶ: ನಾಗಮಲೆಗೆ ಚಾರಣಕ್ಕೆ ತೆರಳಲು ಅರಣ್ಯ ಇಲಾಖೆಯ www.aranyavihaara.karanataka.gov.inಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ನಂತರ ದಿನಾಂಕ ನಿಗದಿ ಮಾಡಿಕೊಂಡು ನಾಗಮಲೆ ದರ್ಶನ ಪಡೆಯಬಹುದಾಗಿದೆ. ಭಕ್ತಾದಿಗಳಿಗೆ ಹಾಗೂ ಚಾರಿಣಿಕರಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೂ ಸ್ಲಾಟ್‌ನ ಬುಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಒಬ್ಬರಿಗೆ 200 ರೂಪಾಯಿ ನಿಗದಿ ಮಾಡಲಾಗಿದೆ.
ನಾಗಮಲೆ ಯಾತ್ರೆಯು 14 ಕಿಲೋ ಮೀಟರ್‌ನಷ್ಟಿದ್ದು, ಹಳೆಯೂರು ಗೇಟ್‌ನಿಂದ ಚಾರಣ ಆರಂಭಗೊಳ್ಳಲಿದೆ. ಜೊತೆಗೆ ಮಾರ್ಗದರ್ಶಕರು ಕೂಡ ಇರಲಿದ್ದಾರೆ. ಅರಣ್ಯ ಇಲಾಖೆಯು ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದೆ.
ಇನ್ನು ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ವಲಯ ಅರಣ್ಯಾಧಿಕಾರಿ 9481995510, ಡಿಆರ್‌ಎಫ್ 9481995527, ಪಾಲಾರ್ ಆರ್‌ಎಫ್ 9481995512, ಡಿ.ಆರ್.ಎಫ್.ಓ 9481995531, ಗಸ್ತು ಅರಣ್ಯಪಾಲಕ ಇಂಡಿಗನತ್ತ 9481995597 ಅನ್ನು ಸಂಪರ್ಕಿಸಬಹುದಾಗಿದೆ.
ನಾಗಮಲೆ ಮಾದಪ್ಪನ ಭಕ್ತರ ಆರಾಧ್ಯ ನೆಲೆ: ಮಲೆ ಮಹದೇಶ್ವರ ಸ್ವಾಮಿ ಲಿಂಗದ ರೂಪದಲ್ಲಿ ನಾಗಮಲೆಯಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಇದ್ದು, ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದವರು ನಾಗಮಲೆಗೆ ಬರುವುದು ಸಂಪ್ರದಾಯ ಆಗಿತ್ತು. ದಟ್ಟ ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲಿ ಸಾಗುವುದು ದೈವಿಕ ಜೊತೆ ರೋಮಾಂಚಕ ಅನುಭವ ನೀಡಲಿದೆ.












Click it and Unblock the Notifications