"ವಾಟಾಳ್ ನಾಗರಾಜ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ"
ಚಾಮರಾಜನಗರ, ಅಕ್ಟೋಬರ್, 18: ಕನ್ನಡ ಪರ ಪ್ರಮುಖ ಹೋರಾಟಗಾರರಲ್ಲಿ ವಾಟಾಳ್ ನಾಗರಾಜ್ ಕೂಡ ಒಬ್ಬರಾಗಿದ್ದಾರೆ. ಇದೀಗ ಅವರಿಗೆ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಚಳುವಳಿಯ ಧೀಮಂತ ನಾಯಕರಾದ ವಾಟಾಳ್ ನಾಗರಾಜ್ ಅವರು ಕನ್ನಡಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡವರು ಮತ್ತು ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಗಳ ಉಳುವಿಗಾಗಿ ಕಳೆದ 6 ದಶಕಗಳಿಂದ ನಿರಂತರವಾಗಿ ಸಾವಿರಾರು ಹೋರಾಟಗಳನ್ನು ನಡೆಸಿ ದಾಖಲೆ ಸೃಷ್ಟಿಸಿದ್ದಾರೆ ಮತ್ತು ಕರ್ನಾಟಕದ ಶಾಸನ ಸಭೆಯಲ್ಲಿ ಹಿರಿಯ ಸದಸ್ಯರಾಗಿ 5 ಬಾರಿ ಶಾಸಕರಾಗಿದ್ದಾರೆ. ಈ ಮೂಲಕ ಈ ನಾಡಿನ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡದ ಬೆಳವಣಿಗೆಗೆಗಾಗಿ ಅಭೂತಪೂರ್ವ ಕೆಲಸ ಮಾಡಿರುತ್ತಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ವಾಟಾಳ್ ನಾಗರಾಜ್ ಅವರು ಇಲ್ಲದ ಶಾಸನ ಸಭೆಯನ್ನು ಊಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಪ್ರಮಾಣಿಕವಾಗಿ ವಾಟಾಳ್ ನಾಗರಾಜ್ ಅವರಂತಹ ಅದ್ಭುತ ಸಂಸದಿಯ ಪಟುವನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಬೇಕಾಗಿತ್ತು. ಇದು ಆಗದೆ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನಮ್ಮ ದೇಶದ ಇತಿಹಾಸದಲ್ಲೇ ಒಂದು ಭಾಷೆಯ ಉಳಿವಿಗಾಗಿ 6 ದಶಕಗಳ ಕಾಲ ನಿರಂತರ ಹೋರಾಟ ಮಾಡಿದ ಹೋರಾಟಗಾರರು ಇನ್ನೊಬ್ಬರಿಲ್ಲ ಎಂದು ತಿಳಿಸಿದ್ದಾರೆ.
ಇಂತಹ ವ್ಯಕ್ತಿಗೆ ರಾಜ್ಯ ಸರ್ಕಾರ ಇನ್ನೂ ಸಹ ಕರ್ನಾಟಕ ರತ್ನ ಪ್ರಶಸ್ತಿ ನೀಡದೆ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಥಮ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಾವು ಕನ್ನಡದ ಬಗ್ಗೆ ಅಪಾರ ಕಾಳಜಿ ಇರುವುದು ಪ್ರಶಂಸನೀಯ ಎಂದು ಉಲ್ಲೇಖಸಿದ್ದಾರೆ.
ಕನ್ನಡ ಚಳುವಳಿಯ ಹಿರಿಯ ಮತ್ತು ಧೀಮಂತ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರಿಗೆ ಈ ಬಾರಿಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಈ ಮೂಲಕ ತಮ್ಮ ಸರ್ಕಾರದ ಕನ್ನಡ ಪ್ರೇಮವನ್ನು ತೋರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಶಿವಲಿಂಗಮೂರ್ತಿ, ಚಾ.ರಾ.ಕುಮಾರ್, ನಂಜುಂಡಶೆಟ್ಟಿ, ಚಾ.ಸಿ.ಸಿದ್ದರಾಜು, ಪ್ರಕಾಶ್ ಸೇರಿದಂತೆ ಮತ್ತತರರು ಹಾಜರಿದ್ದರು.












Click it and Unblock the Notifications