ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಂಕಿ ಅವಘಡ ಕೇಸ್: 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಭಸ್ಮ, ನೌಕರ ಅಮಾನತು
ಚಾಮರಾಜನಗರ, ಡಿಸೆಂಬರ್, 02: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ (ಡಿಸೆಂಬರ್ 01) ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನಾಶಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಾಹಿತಿ ನೀಡಿದ್ದು, ಶುಕ್ರವಾರ ಮಧ್ಯಾಹ್ನ ಲಾಡು ಪ್ರಸಾದ ತಯಾರಿಕ ಕೇಂದ್ರದಲ್ಲಿ ನಡೆದ ಅಗ್ನಿ ಅವಘಡದಲ್ಲಿ 36,220 ಲಾಡು, 28 ಟಿನ್ ಎಣ್ಣೆ, 50 ಕೆ.ಜಿ.ಯ 9 ಮೂಟೆ ಸಕ್ಕರೆ, 30 ಕೆ.ಜಿ. ದ್ರಾಕ್ಷಿ, 40 ಕೆಜಿ ನಂದಿನಿ ತುಪ್ಪ, 96 ಕೆಜಿ ಕಡ್ಲೆ ಹಿಟ್ಟು ಸಿಲಿಂಡರ್ ಪೈಪ್ ಲೈನ್ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಅಗ್ನಿ ಅವಘಡದಲ್ಲಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ 10.2 ಲಕ್ಷ ನಷ್ಟ ಉಂಟಾಗಿದೆ ಎಂದು ಸರಸ್ವತಿ ತಿಳಿಸಿದ್ದಾರೆ. ಇನ್ನು ಲಾಡು ಪ್ರಸಾದ ತಯಾರಿಕ ಘಟಕದಲ್ಲಿ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಬಿದ್ದು ನಷ್ಟ ಉಂಟಾಗಿರುವ ಹಿನ್ನೆಲೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಕೆ.ಪಿ.ಮಹದೇವಸ್ವಾಮಿ ಅವರನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳ ಆದೇಶದ ಅನ್ವಯ ಲಾಡು ಪ್ರಸಾದ ಘಟಕದ ದ್ವಿತೀಯ ದರ್ಜೆ ಸಹಾಯಕ ಕೆ.ಪಿ.ಮಹದೇವಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಸರಸ್ವತಿ ತಿಳಿಸಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಅಗ್ನಿ ಅವಘಡ
ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು (ಡಿಸೆಂಬರ್ 01) ಅಗ್ನಿ ಅವಘಡ ಸಂಭವಿಸಿತ್ತು
ದೇವಸ್ಥಾನದ ಬಳಿ ಇರುವ ಲಾಡು ಪ್ರಸಾದ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಪ್ರಾಧಿಕಾರದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದರು.
ಘಟಕದಲ್ಲಿರುವ ಸಿಲಿಂಡರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಇದನ್ನು ನಂದಿಸುವುದರೊಳಗೆ ಘಟಕದಲ್ಲಿ ಸಿಹಿ ಜಿಡ್ಡು ಹಾಗೂ ಎಣ್ಣೆ ಪದಾರ್ಥ ಇದ್ದ ಪರಿಣಾಮ ಬೆಂಕಿ ಆವರಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಲಾಡು ತಯಾರಿಕ ಸಾಮಗ್ರಿ ಭಸ್ಮವಾಗಿದ್ದವು.












Click it and Unblock the Notifications