ಕೊಳ್ಳೇಗಾಲ: ತ್ರಿಶೂಲಗಳಲ್ಲಿ ಹೊಡೆದಾಡಿಕೊಂಡ ಅರ್ಚಕರು
ಚಾಮರಾಜನಗರ, ಜೂನ್, 01: ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಗಲಾಟೆ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪ್ರಸಿದ್ಧ ಯಾತ್ರಸ್ಥಳವಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಡೆದಿದೆ.
ಚಿಕ್ಕಲೂರು ದೇವಸ್ಥಾನದ ಅರ್ಚಕರಾದ ಶಂಕರಪ್ಪ(65), ಶಿವಕುಮಾರಸ್ವಾಮಿ(40) ಹಾಗೂ ನಂಜುಂಡಸ್ವಾಮಿ(32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ಪಡೆಯಲು ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದು, ದೀಕ್ಷೆ ಕೊಡಲು ಒಂದು ಗುಂಪು ದೇಗುಲದ ಹೊರಗೆ ತಯಾರಿ ಮಾಡಿಕೊಳ್ಳುವಾಗ ಈ ವೇಳೆ ಮತ್ತೊಂದು ಗುಂಪು ದೀಕ್ಷೆ ನಾವು ಕೊಡುತ್ತೇವೆ ಎಂದು ತಡೆ ಒಡ್ಡಿದೆ. ಆಗ ನಂಜುಂಡಸ್ವಾಮಿ ಮತ್ತು ಶಂಕರಪ್ಪನ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಈ ಘಟನೆ ಹೊಡೆದಾಟದ ಹಂತಕ್ಕೂ ಹೋಗಿದೆ.
ವಿಪರ್ಯಾಸ ಎಂದರೆ ಸಿದ್ದಪ್ಪಾಜಿ ಬೆತ್ತ ಮತ್ತು ತ್ರಿಶೂಲಗಳನ್ನು ಹಲ್ಲೆಗೆ ಆಯುಧವಾಗಿ ಬಳಸಿಕೊಂಡಿದ್ದು, ಶಂಕರಪ್ಪನ ತೊಡೆ ಮೂಳೆ ಮತ್ತು ಶಿವಕುಮಾರ್ ತಲೆಗೆ ಹಾಗೂ ಮತ್ತೊಂದು ಗುಂಪಿನ ನಂಜುಂಡಸ್ವಾಮಿಗೆ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಇನ್ನು ಈ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಬಡಿದಾಡಿಕೊಂಡ KSRTC ಬಸ್ ಕಂಡಕ್ಟರ್, ಕಾನ್ಸ್‌ಟೇಬಲ್: ಟಿಕೆಟ್ ವಿಚಾರಕ್ಕೆ ಜಗಳವಾಗಿ ಸಾರ್ವಜನಿಕವಾಗಿ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಬಸ್ ಕಂಡಕ್ಟರ್ ಹೊಡೆದಾಡಿಕೊಂಡ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾಗಾದರೆ ಈ ಸಂಘರ್ಷ ನಡೆಯಲು ಕಾರಣವಾದ್ರೂ ಏನು? ಇಲ್ಲಿದೆ ನೋಡಿ ಮಾಹಿತಿ.
ಗುಂಡ್ಲುಪೇಟೆ ಡಿಪೋದ ಕಂಡಕ್ಟರ್ ಲೋಕೇಶ್ ಹಾಗೂ ಮೈಸೂರು ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್ ಕೊಟ್ರೇಶ್ ಹೊಡೆದಾಡಿಕೊಂಡಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಲಾಟೆ ನಡೆದಿದ್ದು ಯಾಕೆ?: ಕೊಟ್ರೇಶ್ ಕುಟುಂಬ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಬಳಿಕ, ಬೆಟ್ಟದಿಂದ ಗುಂಡ್ಲುಪೇಟೆಗೆ ವಾಪಾಸ್ ಆಗುವ ವೇಳೆ ಕೊಟ್ರೇಶ್ ಅವರ ಚಿಕ್ಕಮ್ಮ ಮುಂದೆ ಕುಳಿತಿದ್ದರೇ ಕೊಟ್ರೇಶ್ ಹಿಂದೆ ಕುಳಿತಿದ್ದರು.
ಕೊಟ್ರೇಶ್ ಅವರ ಟಿಕೆಟ್ ಅನ್ನು ಚಿಕ್ಕಮ್ಮ ತೆಗೆದುಕೊಂಡಿದ್ದರು. ಇದು ತಿಳಿಯದೇ ಕೊಟ್ರೇಶ್ ಕೂಡ ಟಿಕೆಟ್ ಪಡೆದುಕೊಂಡಿದ್ದಾರೆ. ಬಸ್‌ನಿಂದ ಇಳಿದ ಬಳಿಕ ಎರಡು ಬಾರಿ ಟಿಕೆಟ್ ಪಡೆದ ವಿಚಾರಕ್ಕೆ ಕಂಡಕ್ಟರ್ ಲೋಕೇಶ್ ಹಾಗೂ ಕಾನ್ಸ್‌ಟೇಬಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ, ವಿಕೋಪಕ್ಕೆ ತಿರುಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾನ್ಸ್‌ಟೇಬಲ್ ಸಿವಿಲ್ ಡ್ರೆಸ್‌ನಲ್ಲಿದ್ದ ಕಾರಣ ಸಾರಿಗೆ ಸಂಸ್ಥೆಯ ಇತರೆ ಚಾಲಕರು, ಕಂಡಕ್ಟರ್‌ಗಳು ಕೂಡ ಕೊಟ್ರೇಶ್‌ಗೆ ಹೊಡೆದಿರುವುದು ಈ ವೀಡಿಯೋದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಇಬ್ಬರೂ ದೂರು-ಪ್ರತಿದೂರು ಕೊಟ್ಟಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರೆಬೇಕಿದೆ.












Click it and Unblock the Notifications