ಗುಂಡ್ಲುಪೇಟೆಯಲ್ಲಿ ಉಪವಾಸ ಸತ್ಯಾಗ್ರಹ, ಐವರು ರೈತರು ಅಸ್ವಸ್ಥ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಡಿಸೆಂಬರ್ 22: ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಸಮೀಪ ಚೀನಾ ಮೂಲದ ಕಂಪನಿಯು ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮತಿ ನೀಡಿರುವುದರ ವಿರುದ್ಧ ತಾಲೂಕು ಪಂಚಾಯಿತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಇದುವರೆಗೆ ಐವರು ಧರಣಿನಿರತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

ಮೊದಲಿನಿಂದಲೂ ರೈತರು ಅಧಿಕಾರಿಗಳು ಚೀನಾ ಮೂಲದ ಕಂಪನಿಯು ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗಾಗಲೇ ಸಂಬಂಧಿಸಿದ ಕೆಲವು ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.

Request

ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಅಕ್ರಮವಾಗಿ ಕಾರ್ಖಾನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾನಿರತರ ಒತ್ತಾಯವಾಗಿದೆ.

ಸದ್ಯ ರೈತರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಮಧ್ಯೆ ಇಬ್ಬರು ಧರಣಿನಿರತರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭುಸ್ವಾಮಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದ್ದರು. ತಹಶೀಲ್ದಾರ್ ಆದೇಶದ ಮೇರೆಗೆ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಮಾತಿನ ಚಕಮಕಿ ನಡೆದಿತ್ತು.

Hospital

20 ರೈತರು ಕಾರ್ಪೆಟ್ ಹಾಸಿ ಕೊರೆಯುವ ಚಳಿಯಲ್ಲಿಯೇ ಮಲಗಿ ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಿದ್ದು, ಮಾಡ್ರಹಳ್ಳಿ ಲೋಕೇಶ್ ಹಾಗೂ ಸಿದ್ದಶೆಟ್ಟಿ ಎಂಬ ರೈತರು ಅಸ್ವಸ್ಥರಾಗಿದ್ದರು. ಇದೀಗ ರೈತ ಸಂಘದ ತಾಲೂಕು ಅಧ್ಯಕ್ಷ ಕುಂದಕೆರೆ ಸಂಪತ್ತು, ಹುಲುಗನಾಯ್ಕ, ಟಿ.ಎಸ್.ಶಾಂತಮಲ್ಲಪ್ಪ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪರಿಸ್ಥಿತಿ ಬಿಗಡಾಯಿಸಿದ್ದರಿಂದ ತಹಶೀಲ್ದಾರ್ ಕೆ.ಸಿದ್ದು ಆಸ್ಪತ್ರೆಗೆ ಭೇಟಿ ನೀಡಿ, ರೈತರ ಆರೋಗ್ಯ ವಿಚಾರಿಸಿದರು. ಕೂಡಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಥಾನಿಕ ಜಿಲ್ಲಾಧಿಕಾರಿ ಡಿ.ಭಾರತಿ ರೈತರನ್ನು ಭೇಟಿ ಮಾಡಿದರು. ಆದರೆ ಇವರಿಗೆ ಮನವಿ ಸಲ್ಲಿಸಿ ಧರಣಿ ನಿಲ್ಲಿಸಲು ರೈತರು ನಿರಾಕರಿಸಿದ್ದಾರೆ.

Protest

ಜಿಲ್ಲಾ ಪಂಚಾಯಿತಿ ಸಿಇಒ ತಮ್ಮ ಮನವಿ ಸ್ವೀಕರಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಪ್ರಾಣ ಹೋದರೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Farmers have been continued hunger strike in Gundlupet, Chamarajanagar district. Farmers urged government to not give permission to China company to start flower unit. Five farmers admitted in hospital.
Please Wait while comments are loading...