ಚಾಮರಾಜನಗರ: ಹುಲಿ, ಚಿರತೆ ಕಾಟಕ್ಕೆ ಬೇಸತ್ತು ತಾಲೂಕು ಕಚೇರಿಗೆ ಮೃತ ಜಾನುವಾರು ತಂದ ರೈತರು
ಚಾಮರಾಜನಗರ, ನವೆಂಬರ್, 11 ಹುಲಿ, ಚಿರತೆ ದಾಳಿಗೆ ಬಲಿಯಾದ ಜಾನುವಾರುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಅಲ್ಲದೆ, ಕಾಡು ಪ್ರಾಣಿಗಳ ಹಾವಳಿಗೆ ಕ್ರಮ ಕೈಗೊಳ್ಳಬೇಕು ಎಂದು ಹುಲಿ ದಾಳಿಗೊಳಗಾದ ಮೃತ ಜಾನುವಾರುವನ್ನು ತಾಲ್ಲೂಕು ಕಚೇರಿ ಬಳಿ ತಂದು ರೈತರು ಸೋಮವಾರ (ನವೆಂಬರ್ 04) ಸಂಜೆ ದಿಢೀರ್ ಪ್ರತಿಭಟಿಸಿದರು.
ಸಂಘಟನೆಯ ಸಾಮೂಹಿಕ ನಾಯಕತ್ವದ ವೀರನಪುರ ನಾಗಪ್ಪ ಅವರ ನೇತೃತ್ವದಲ್ಲಿ ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ನಾಗಪ್ಪ ನವೆಂಬರ್ 3ರಂದು ಮೃತಪಟ್ಟ ನಾಗೇಶ್ ಅವರ ಹಸು ಸೇರಿ ಒಟ್ಟು 20 ಜಾನುವಾರುಗಳನ್ನು ಹುಲಿ ಮತ್ತು ಚಿರತೆ ಬಲಿ ಪಡೆದಿದೆ. ಹೀಗಿದ್ದರೂ ರೈತರಿಗೆ ಪರಿಹಾರ ನೀಡಿಲ್ಲ. ಭಾನುವಾರ ಹಸು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಹಾರಿಕೆ ಉತ್ತರ ನೀಡಿದರು.

ಆದ್ದರಿಂದ ಗ್ರಾಮದಲ್ಲಿ ಮೃತಪಟ್ಟ ಎಲ್ಲಾ ಜಾನುವಾರುಗಳಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷದ ಮನೋಭಾವದವರಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಕಾಡು ಪ್ರಾಣಿಗಳಿಂದ ಮೃತ ಪಟ್ಟ ಜಾನುವಾರುಗಳಿಗೆ ಇನ್ನೂ ಪರಿಹಾರ ಬಂದಿರುವುದಿಲ್ಲ. ಇದರಿಂದಾಗಿ ರೈತರು ಸಾಲವಂತರಾಗುತ್ತಿದ್ದಾರೆ. ಶೀಘ್ರವಾಗಿ ಪರಿಹಾರ ನೀದಿದರೆ, ಅದರ ಬದಲಿಗೆ ಮತ್ತೊಂದು ಜಾನುವಾರು ತಂದು ಜೀವನೋಪಾಯಕ್ಕೆ ಅನುಕೂಲ ಆಗುತ್ತದೆ ಎಂದರು.
ನಂತರ ತಾಲ್ಲೂಕು ಕಚೇರಿ ಮುಂದೆ ಹಸುವಿನ ಮೃತದೇಹವಿದ್ದ ಟ್ರ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ ಮುಂದುವರೆಸಿದರು. ಬಳಿಕ, ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆಗಾಗಿ ಬೋನನ್ನು ಅಳವಡಿಕೆ ಮಾಡಲಾಗಿದೆ. ಹುಲಿ ಚಲನವಲನ ಅರಿಯಲು ಮಂಗಳವಾರ ಡ್ರೋಣ್ ಕಾರ್ಯಾಚರಣೆ ನಡೆಸಲಿದ್ದು, ಮೃತ ಜಾನುವಾರುಗಳಿಗೆ ಪರಿಹಾರ ಕೊಡುವ ಭರವಸೆ ನೀಡಿದರು.
ಕಾಡಾನೆ ಸಾವು: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಆಗಾಗ್ಗೆ ಓಡಾಡುತ್ತಿದ್ದ ಕೂಡು ದಂತದ ಕಾಡಾನೆ ಮೃತಪಟ್ಟಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನಲ್ಲಿ ಕೂಡುದಂತದ ಕಾಡಾನೆ ಮೃತಪಟ್ಟಿರುವುದು ಗಸ್ತು ನಡೆಸುವಾಗ ಗೊತ್ತಾಗಿದೆ. ಬಳಿಕ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿ ಸ್ವಾಭಾವಿಕವಾಗಿ ಆನೆ ಮೃತಪಟ್ಟಿದೆ ಎಂದು ಖಚಿತ ಪಡಿಸಿದ್ದಾರೆ. ಮೃತ ಆನೆಗೆ, 50ರಿಂದ 55 ವರ್ಷ ವಯಸ್ಸಿನದು ಎಂದು ಅಂದಾಜು ಮಾಡಲಾಗಿದೆ.
ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡು ಸೇರಿದಂತೆ ವಿವಿಧೆಡೆ ಈ ನೀಳದಂತದ ಕಾಡಾನೆ ಓಡಾಡುತ್ತಿತ್ತು. ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಬರುತ್ತಿದೆ ಎನ್ನಲಾಗುತ್ತಿತ್ತು. ಇನ್ನು ಇದರ ಓಡಾಡದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.












Click it and Unblock the Notifications