Chamarajanagar Dasara 2024: ಕಲ್ಲಂಗಡಿಯಲ್ಲಿ ಅರಳಿದ ಸಿಎಂ, ಹೂವಲ್ಲಿ ಮೂಡಿಬಂತು ಗೋಪಾಲಸ್ವಾಮಿ ಬೆಟ್ಟ
Chamarajanagar Dasara 2024: ಈಗಾಗಲೇ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇದೀಗ ಇಂದಿನಿಂದ (ಅಕ್ಟೋಬರ್ 07) ಚಾಮರಾಜನಗರ ಜಿಲ್ಲಾ ದಸರಾ ಆರಂಭಗೊಂಡಿದ್ದು, ಗಡಿಜಿಲ್ಲೆ ಸಂಭ್ರಮ-ಸಡಗರದಲ್ಲಿ ಕಳೆಗಟ್ಟಿದೆ. ಹಾಗಾದರೆ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರ ಜಿಲ್ಲಾಡಳಿತ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ವಿವಿಧ ಹೂಗಳಿಂದ ಪ್ರಸಿದ್ಧ ಯಾತ್ರಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮೂಡಿ ಬಂದಿದೆ. ಹಿಮವದ್ ಗೋಪಾಲನ ಸನ್ನಧಿಯೇ ಚಾಮರಾಜನಗರದಲ್ಲಿ ಸ್ಥಾಪಿತವಾದಂತೆ ಹೂಗಳಿಂದ ಬೆಟ್ಟದ ಪ್ರತಿಕೃತಿ ಕಂಗೊಳಿಸುತ್ತಿದ್ದು, ಇದಕ್ಕೆ ಜನರ ಮನಸೋತರು.

ಕಲ್ಲಂಗಡಿಯಲ್ಲಿ ರಾಜಕಾರಣಿಗಳು: ಕಲ್ಲಂಗಡಿಯಲ್ಲಿ ರಾಜಕಾರಣಿಗಳನ್ನು ಮುಖವನ್ನು ಚಿತ್ರಿಸಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಕಲ್ಲಂಗಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಂಸದ ಸುನಿಲ್ ಬೋಸ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಡಾ.ಬಿ.ಆರ್.ಅಂಬೇಡ್ಕರ್ ಮೂಡಿದ್ದಾರೆ. ಇನ್ನು, ಕುಂಬಳಕಾಯಿ ಹಾಗೂ ವಿವಿಧ ತರಕಾರಿ ಬಳಸಿಕೊಂಡು ಗಣಪತಿ, ವಿವಿಧ ಆಕೃತಿಗಳಿದ್ದು, ಹೂಗಳಲ್ಲಿ ವೀಣೆ, ತಬಲ, ನವಿಲಿನ ಆಕೃತಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ದಸರಾಗೆ ಚಾಲನೆ ನೀಡಿದ ಸಚಿವ ವೆಂಕಟೇಶ್: ಚಾಮರಾಜನಗರ ಜಿಲ್ಲಾ ದಸರಾ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಚಾಮರಾಜೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಬಳಿಕ, ಜಿಲ್ಲಾಡಳಿತ ಭವನ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಮೆರವಣಿಗೆ ಸಚಿವರು ಚಾಲನೆ ನೀಡಿದರು.
ಕ್ಯಾಬಿನೆಟ್ ಸಭೆ ಬಳಿಕ ಜಾತಿ ಗಣತಿ ಬಿಡುಗಡೆ: ಚೆಲುವ ಚಾಮರಾಜನಗರ ದಸರಾ ಮಹೋತ್ಸವ ಚಾಲನೆ ನೀಡಿದ ಸಚಿವ ಕೆ.ವೆಂಕಟೇಶ್ಮಾ ಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದರು. ಕ್ಯಾಬಿನೆಟ್ ಸಭೆಯ ಬಳಿಕ ಜಾತಿ ಗಣತಿಯ ವರದಿ ಬಿಡುಗಡೆ ಮಾಡಲಾಗುತ್ತೆ. ಇದು ನಮ್ಮ ಮ್ಯಾನೋಫೆಸ್ಟೊದಲ್ಲೇ ಇದೆ ಹಾಗಾಗಿ ವರದಿ ಬಿಡುಗಡೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಸಿಎಂ ಸಿದ್ದರಾಮಯ್ಯ ಯಾವ ಕ್ಷಣದಲ್ಲಿ ಬೇಕಾದ್ರು ರಾಜೀನಾಮೆ ಕೊಡುತ್ತಾರೆ. ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹಗಲುಗನಸು ಕಾಣ್ತಾಯಿದ್ದಾರೆ ಕಾಣ್ಲಿ ಬಿಡಿ. ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ಬೇಕು ಹೇಳಿ? ಎಂದು ಪ್ರಶ್ನಿಸಿದರು.
ದಲಿತ ಸಿಎಂ ಪ್ರಸ್ತಾಪದ ಬಗ್ಗೆ ಮಾತನಾಡಿ, ದಲಿತ ಸಿಎಂ ಪ್ರಸ್ಥಾವ ನಮ್ಮಲ್ಲಿ ಇಲ್ಲ ಸಿಎಂ ಖುರ್ಚಿ ಖಾಲಿಯಿಲ್ಲ. ಹಾಗಾಗಿ ದಲಿತ ಸಿಎಂ ಕೂಗು ಎಂಬ ವಿಚಾರ ಅಪ್ರಸ್ಥುತ ಎಂದರು.
40 ವರ್ಷಗಳ ಬಳಿಕ ನಡೆದ ಖಾಸಗಿ ದರ್ಬಾರ್: ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಜನನ ಮಂಟಪದಲ್ಲಿ ಆಯೋಜಿಸಿದ್ದ ಖಾಸಗಿ ದರ್ಬಾರ್‌ನಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
40 ವರ್ಷಗಳ ನಂತರ ಕೆಂಪನಂಜಾಂಬ ಸಮೇತ ಚಾಮರಾಜೇಶ್ವರಸ್ವಾಮಿ ಹೆಸರಿನಲ್ಲಿ ಖಾಸಗಿ ದರ್ಬಾರ್ ಪೂಜಾ ಕೈಂಕರ್ಯಗಳು ನಡೆದವು. ಸ್ವಾಮಿಗೆ ಬಹುಪರಾಕ್ ಹೇಳಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯಂ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ವಿವಿಧ ಸಂಘಟನೆಗಳ ಮುಖಂಡರು ಸ್ವಾಮಿಗೆ ನಮಿಸಿದರು.
ಗಣ್ಯರ ಹೆಸರಿನಲ್ಲಿ ಬಹುಪರಾಕ್ ನುಡಿಯಲಾಯಿತು. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಬ್‍ಇನ್ಸ್‍ಪೆಕ್ಟರ್ ಬಿ.ಎಂ.ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು ಪೊಲೀಸ್ ಗೌರವ ವಂದನೆ ಸಲ್ಲಿಸಿದರು. ಬಹಳಷ್ಟು ವರ್ಷಗಳ ಬಳಿಕ ನಡೆದ ಈ ವಿಶೇಷ ಖಾಸಗಿ ದರ್ಬಾರ್ ಅನ್ನು ಸಾಕಷ್ಟು ಜನರು ಕಣ್ತುಂಬಿಕೊಂಡರು.












Click it and Unblock the Notifications