ಮಲೆ ಮಾದಪ್ಪನಿಗೆ ದಾನಿಯೊಬ್ಬರು ನೀಡಿದ ವಿಶೇಷ ಬೆಳ್ಳಿ ಆರತಿ ತಟ್ಟೆ ಹೇಗಿದೆ ಗೊತ್ತಾ?-ವಿಡಿಯೋ ವೈರಲ್
ಚಾಮರಾಜನಗರ, ಮೇ, 12: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ದಾನಿಗಳಾದ ನಾಗಮಣಿ ಎಂ ಮತ್ತು ಕುಟುಂಬ 1 ಕೆ.ಜಿ. 600 ಗ್ರಾಂ ತೂಕದ ಬೆಳ್ಳಿಯ ಆರತಿ ತಟ್ಟೆಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಮಾದಪ್ಪನಿಗೆ ಕಾಣಿಕೆಯಾಗಿ ಬಂದ ಬೆಳ್ಳಿ ಆರತಿ ತಟ್ಟೆ ತುಂಬಾ ವಿಶೇಷತೆಯಿಂದ ಕೂಡಿದ್ದು, ಮಾದಪ್ಪನ ವಾಹನವಾದ ಹುಲಿ, ಢಮರುಗ ಸಮೇತ ತ್ರಿಶೂಲ, ನಂದಿ ಸೇರಿದಂತೆ ಎರಡೂ ಕೈತುಂಬಾ ಹಿಡಿದ ನಂದಾದೀಪವನ್ನು ಒಳಗೊಂಡಿದ್ದು, ತುಂಬಾ ಆಕರ್ಶಕವಾಗಿದೆ.

ಹರಿದುಬಂದ ಭಕ್ತಸಾಗರ: ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಅಕ್ಷಯ ತದೀಯ ಅಮಾವಾಸ್ಯೆ ಹಿನ್ನೆಲೆ ಸುಡು ಬಿಸಿಲನ್ನು ಲೆಕ್ಕಿಸದೇ ಭಕ್ತಸಾಗರವೇ ಹರಿದುಬಂದಿದೆ.
ತದೀಯ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದಿದ್ದು, ಜೊತೆಗೆ ಹುಲಿ ವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ , ಬೆಳ್ಳಿ ರಥೋತ್ಸವ ಸಡಗರದಿಂದ ನಡೆದಿದೆ. ಇನ್ನು ಅಮವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಮಹದೇಶ್ವರನ ದರ್ಶನ ಮಾಡಲು ಹರಿದು ಬಂದಿದ್ದು, ಮಳೆಯ ನಡುವೆ ಭಕ್ತಾದಿಗಳ ಉತ್ಸಾಹದಿಂದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ದೇವಾಲಯದ ಸಮೀಪದ ಅಲಂಬಡಿ ಬಸವನಿಗೆ ಎಣ್ಣೆ ಹಾಗೂ ಹಾಲಾಭಿಷೇಕ ಮಾಡಿದ ರೈತರು ಮಳೆ-ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ವಿಜೃಂಭಣೆಯಿಂದ ಜರುಗಿದ ಮಹಾರಥೋತ್ಸವ: ಹನೂರು ತಾಲೂಕಿನ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಇತ್ತೀಚೆಗಷ್ಟೇ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣ, ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿತ್ತು.
ರಥೋತ್ಸವಕ್ಕೂ ಮುನ್ನ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೇರಿನ ಬಳಿ ಧಾರ್ಮಿಕ ವಿಧಿ ವಿಧಾನ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವ ಮೂರ್ತಿ ಇರಿಸಿ ಬೂದುಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಬೆಲ್ಲದ ಆರತಿ ಬೆಳಗಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರನ್ನು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವೂ ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು ಜವನ, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು. ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.












Click it and Unblock the Notifications