ಹನೂರು: ಮನೆ ನಿರ್ಮಾಣಕ್ಕೆ ಸೋಲಿಗರಿಂದ ₹18,000 ಲಂಚ ಪಡೆದ ಡಿಆರ್‌ಎಫ್ಒ ಲೋಕಾಯುಕ್ತ ಬಲೆಗೆ
ಚಾಮರಾಜನಗರ, ಸೆಪ್ಟೆಂಬರ್, 19: ಮನೆ ನಿರ್ಮಾಣಕ್ಕಾಗಿ ಸೋಲಿಗ ಜನಾಂಗದಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪಾಲಾರ್ ಗ್ರಾಮದಲ್ಲಿ ನಡೆದಿದೆ. ಹಾಗಾದರೆ ಘಟನೆ ನಡೆದಿದ್ದು ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ 18 ಮನೆ ಮಂಜೂರಾಗಿದ್ದವು. ಎಲ್ಲಾ ಮನೆಯವರು ಅಡಿಪಾಯ ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಬಿಡುಗಡೆ ಆಗಿದೆ.
ಈ ವೇಳೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳನ್ನು ನೀವು ಮನೆಯ ಗೋಡೆ ಕಟ್ಟಬೇಡಿ ಎಂದು ಭೋಜಪ್ಪ ಕಿರುಕುಳ ನೀಡಿ ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಬಳಿಕ ನಿವಾಸಿಗಳೆಲ್ಲರೂ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18,000 ರೂಪಾಯಿ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಪಾಲಾರ್ ಗ್ರಾಮದ ಫಲಾನುಭವಿ ಮುರುಗೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿ ಭೋಜಪ್ಪ ರವರನ್ನು 18,000 ರೂಪಾಯಿ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ: ರೈತನೊಬ್ಬನ ಜಮೀನು ಪೋಡಿ ಮಾಡಿಕೊಡಲು ಕಂದಾಯ ಅಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬೆಲೆಗೆ ಬಿದ್ದಿದ್ದಾರೆ.
ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಕಂದಾಯ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಾಗಪ್ಪ ಲಮಾಣಿ ಅವರು ಹಲಗಲದ್ದಿ ಗ್ರಾಮದ ತಿಪ್ಪೇಸ್ವಾಮಿ ಅವರ ಜಮೀನು ಪೋಡಿ ಮಾಡಿಕೊಡಲು 10,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. 9,000 ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಿರಿಯೂರು ತಾಲೂಕು ಕಛೇರಿಯಲ್ಲಿ ಈ ಘಟನೆ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ, ಎಸ್ಪಿ ವಾಸುದೂ, ಇನ್ಸ್ಪೆಕ್ಟರ್ ಶಿಲ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.












Click it and Unblock the Notifications