1 ಲಕ್ಷ ಪರೀಕ್ಷೆ ಪೂರ್ಣಗೊಳಿಸಿದ ಚಾಮರಾಜನಗರ ಕೋವಿಡ್ ಲ್ಯಾಬ್
ಚಾಮರಾಜನಗರ, ಡಿಸೆಂಬರ್ 20: ಚಾಮರಾಜನಗರದ ಕೋವಿಡ್ ಪರೀಕ್ಷಾ ಲ್ಯಾಬ್ 1 ಲಕ್ಷ ಪರೀಕ್ಷೆಗಳನ್ನು ಪೂರೈಸಿದೆ. ಮೇ 6ರಂದು ಆರ್‌ಟಿಪಿಸಿಆರ್ ಪರೀಕ್ಷೆ ಮಾಡುವ ಲ್ಯಾಬ್ ಅನ್ನು ಉದ್ಘಾಟನೆ ಮಾಡಲಾಗಿತ್ತು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರುವ ಆರ್‌ಟಿಪಿಸಿಆರ್ ಕೋವಿಡ್-19 ಸುಸಜ್ಜಿತ ಪ್ರಯೋಗಾಲಯ 1 ಲಕ್ಷದ 655 ಮಾದರಿಗಳ ಪರೀಕ್ಷೆಗಳನ್ನು ನಡೆಸಿದೆ. ಈ ಮೂಲಕ ಪ್ರಯೋಗಾಲಯದ ಕಾರ್ಯ ವೈಖರಿ ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್ ಆರಂಭದ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರಯೋಗಾಲಯ ಇರಲಿಲ್ಲ. ಗಂಟಲು ಮಾದರಿಗಳನ್ನು ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಿಕೊಡಲಾಗುತ್ತಿತ್ತು. ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿ ತ್ವರಿತವಾಗಿ ಫಲಿತಾಂಶ ಪಡೆಯುವ ಉದ್ದೇಶದಿಂದ ಮೇ 6 ರಂದು ಲ್ಯಾಬ್ ಆರಂಭಿಸಲಾಯಿತು.

ಆರಂಭದಲ್ಲಿ ಪ್ರತಿದಿನ 500 ಮಾದರಿ ಪರೀಕ್ಷೆಗಳಿಗಷ್ಟೇ ಸೀಮಿತವಾಗಿದ್ದ ಪ್ರಯೋಗಾಲಯ ಪ್ರಸ್ತುತ ಪ್ರತಿದಿನ 1 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಕಾಲಕಾಲಕ್ಕೆ ನೀಡಲಾಗುತ್ತಿರುವ ನಿರ್ದೇಶನಗಳು ಹಾಗೂ ಗುರಿಗೆ ಅನುಗುಣವಾಗಿ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ.
ಕೋವಿಡ್ ಪರೀಕ್ಷೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಫಲಿತಾಂಶ ನೀಡುವ ಸಾಮರ್ಥ್ಯವನ್ನು ಪ್ರಯೋಗಾಲಯ ಹೊಂದಿದೆ. ಗಂಟಲು ದ್ರವ ಮಾದರಿ ಸ್ವೀಕರಿಸಿದ ಗರಿಷ್ಠ 24 ಗಂಟೆಯೊಳಗೆ ಫಲಿತಾಂಶದ ವರದಿ ನೀಡಲಾಗುತ್ತದೆ.

ಸತತವಾಗಿ ಕೋವಿಡ್ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಿರುವ ಪ್ರಯೋಗಾಲಯ 24*7 ಅವಧಿಯೂ ಕಾರ್ಯನಿರ್ವಹಿಸುತ್ತಿದೆ. ತ್ವರಿತ ಫಲಿತಾಂಶ ನೀಡುತ್ತಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲೂ ಸಹಕಾರಿಯಾಗಿದೆ.
ಈ ಲ್ಯಾಬ್ ಚಾಮರಾಜನಗರ ಜಿಲ್ಲೆಯ ಶಂಕಿತರ ಮಾದರಿ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಮನಗರ, ತುಮಕೂರು, ಗದಗ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಯಿಂದ ಬಂದ ಮಾದರಿಗಳ ಪರೀಕ್ಷೆಯನ್ನು ನಿಗದಿತ ಅವಧಿಯೊಳಗೆ ನಡೆಸಿ, ವರದಿ ರವಾನೆ ಮಾಡಿದೆ.
ಪ್ರಯೋಗಾಲಯದಲ್ಲಿ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರು, ಮೂವರು ಸಂಶೋಧನಾ ಸಿಬ್ಬಂದಿ, 8 ಮಂದಿ ಲ್ಯಾಬ್ ಟೆಕ್ನಿಷಿಯನ್, 7 ಮಂದಿ ಡಾಟಾ ಎಂಟ್ರಿ ಆಪರೇಟರ್, ಇತರೆ ಮಲ್ಟಿ ಟಾಸ್ಕಿಂಗ್ ಮೂವರು ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ.
ಕೋವಿಡ್ ಪರೀಕ್ಷೆಗೆ ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಹಲವಾರು ಗಂಭೀರ ಕಾಯಿಲೆಗಳ ರೋಗ ಪರೀಕ್ಷಾ ವಿಧಾನಕ್ಕೂ ಪ್ರಯೋಗಾಲಯ ಬಳಕೆಯಾಗಲಿದೆ. ಆರೋಗ್ಯ ಕ್ಷೇತ್ರದ ಇನ್ನಿತರ ಮಹತ್ತರ ಸಂಶೋಧನೆಗಳಿಗೆ ಪ್ರಯೋಗಾಲಯವನ್ನು ಉಪಯೋಗಿಸಲು ಅವಕಾಶವಿದೆ.












Click it and Unblock the Notifications