ಕಾವೇರಿ ಕಿಚ್ಚು: ಚಾಮರಾಜನಗರದಲ್ಲಿ ತಲೆ ಕೆಳಗಾಗಿ ನಿಂತು ಚಳವಳಿ ನಡೆಸಿದ ಕನ್ನಡಪರ ಸಂಘಟನೆ
ಚಾಮರಾಜನಗರ, ಸೆಪ್ಟೆಂಬರ್, 01: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲೂ ಪ್ರತಿಭಟನೆ ಕಿಚ್ಚು ಜೋರಾಗಿದ್ದು, ಕನ್ನಡಪರ ಸಂಘಟನೆಗಳು ಇಂದು ಉಲ್ಟಾ ಚಳವಳಿ ನಡೆಸಿದ್ದಾರೆ.
ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಇಂದು ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಈ ವೇಳೆ, ಹೋರಾಟಗಾರ ಶಾ.ಮುರುಳಿ ತಲೆ ಕೆಳಗಾಗಿ ನಿಂತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ರೈತರಿಗೆ ದ್ರೋಹ ಬಗೆಯಲಾಗಿದೆ ಎಂದು ಕಿಡಿಕಾರಿದರು.

ನಮ್ಮ ಜನರಿಗೆ ನೀರಿಲ್ಲ ಆದರೆ ತಮಿಳುನಾಡಿಗೆ ನೀರು ಹರಿಸಿ ಜನರ ಬದುಕನ್ನೇ ಸರ್ಕಾರ ಉಲ್ಟಾ ಮಾಡುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿದ್ದರೂ ಕರ್ನಾಟಕದ ಸಂಸದರು, ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು ಮೌನವಾಗಿದ್ದು, ಇವರೆಲ್ಲರೂ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಕಿಡಿಕಾರಿದರು.
ರಸ್ತೆ ತಡೆದು ಪ್ರತಿಭಟನೆ
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತರು ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾಕರ್ತರು, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕೆಲ ಕಾಲ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರೈತರ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಯಿತು. ಸರ್ಕಾರಿ ಬಸ್‌ಗಳು ಮುಂದೆ ಸಂಚರಿಸಲು ಮುಂದಾದಾಗ ಪ್ರತಿಭಟನಾಕಾರರು ಬಸ್ ಮುಂದೆ ಕುಳಿತು ಅಡ್ಡಿಪಡಿಸಿದರು.
ಅಲ್ಲದೆ ಕಾವೇರಿ ಕೊಳ್ಳದ ರೈತರ ಹಿತ ಬದಿಗೊತ್ತಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತ ದ್ರೋಹಿಯಾಗಿದೆ ಎಂದು ಘೋಷಣೆ ಮೊಳಗಿಸಿದರು. ಇನ್ನು ಕೇಂದ್ರ ಸರ್ಕಾರ ಸಂಕಷ್ಟಕಾಲದಲ್ಲಿ ಮಧ್ಯಪ್ರವೇಶಿಸಬೇಕಾಗಿತ್ತು. ಆದರೆ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಆಗಸ್ಟ್ ತಿಂಗಳಿನಲ್ಲಿ 13 ಟಿಎಂಸಿ ನೀರು ಹರಿಸಿರುವ ಸರ್ಕಾರ ಇದೀಗ ಮತ್ತೆ ನೀರು ಬಿಟ್ಟಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ 100 ಅಡಿಗೆ ಕುಸಿದಿದೆ. ಇಲ್ಲಿನ ಬೆಳೆದು ನಿಂತಿರುವ ಬೆಳೆಗೆ ನೀರು ಕೊಡುತ್ತಿಲ್ಲ. ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗಿಲ್ಲ, ಇದೇ ರೀತಿ ನೀರು ಹರಿಸುತ್ತಿದ್ದರೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮತ್ತಷ್ಟು ದಿನ ಮುಂದೂಡುವುದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿಯಲಿ ಎಂಬ ಹುನ್ನಾರವಾಗಿದೆ. ರಾಜ್ಯದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯಲು ನೀರಾವರಿ ತಜ್ಞರ ತಂಡ ಕಳುಹಿಸಿಕೊಡಬೇಕು. ಜಲಾಶಯದಲ್ಲಿರುವ ನೀರಿನ ಲಭ್ಯತೆ ಬಗ್ಗೆ ತಿಳಿದುಕೊಳ್ಳಲಿ. ಅದನ್ನು ಬಿಟ್ಟು ನೀರು ಹರಿಸಲು ಪದೇ ಪದೇ ಆದೇಶ ಮಾಡುವುದು ಮಲತಾಯಿ ಧೋರಣೆ ಅಲ್ಲವೇ? ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತ ರೈತರು ರಾಜ್ಯ ಸರ್ಕಾರ ಯಾವುದಕ್ಕೂ ಮಣಿಯದೆ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಸಿದರು. ಈ ವೇಳೆ ರೈತ ಸಂಘದ ಮರಿ ಚೆನ್ನಪ್ಪ, ವಿಜಯ್ ಕುರ್ಮಾ, ಬಿದರಕೋಟೆ ರಮೇಶ್, ಇಂಡುವಾಳು ಸಿದ್ದೇಗೌಡ, ಅಣ್ಣೂರು ಮಹೇಂದ್ರ, ರಾಮಕೃಷ್ಣೇಗೌಡ, ಜವರೇಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದ
ಕಾವೇರಿ ನಿರ್ವಹಣಾ ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ನೀರು ನಿಲ್ಲಿಸಿ ರಾಜ್ಯದ ಜನರ ಹಿತ ಕಾಪಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.












Click it and Unblock the Notifications