ಗುಂಡ್ಲುಪೇಟೆಯಲ್ಲಿ ಕರಾಳ ದಂಧೆ: ಜಾನುವಾರುಗಳ ಚರ್ಮ, ಮಾಂಸ, ಮೂಳೆ ಬೇರ್ಪಡಿಸಿ ಮಾರಾಟ
ಚಾಮರಾಜನಗರ, ಅಕ್ಟೋಬರ್ 21: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಜಮೀನಿನಲ್ಲಿ ಅಕ್ರಮವಾಗಿ ಮೃತ ಪ್ರಾಣಿಗಳ ಚರ್ಮ, ಮಾಂಸ, ಮೂಳೆ ಬೇರ್ಪಡಿಸಿ ಮಾರಾಟ ಮಾಡುವ ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಆದರೂ ಪುರಸಭೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ನೆರೆಯ ಕೇರಳದಿಂದ ಪುರಸಭೆ ಹಾಗೂ ಆಸ್ಪತ್ರೆಯ ತ್ಯಾಜ್ಯಗಳನ್ನು ಮಾತ್ರ ಕದ್ದು ತರುತ್ತಿದ್ದ ದಂಧೆಕೋರರು, ಫಾರೆಸ್ಟ್ ಹಾಗೂ ಪೊಲೀಸ್ ಚೆಕ್‌ಪೋಸ್ಟ್ ಕಣ್ಣಪ್ಪಿಸಲು ಕಂಟೈನರ್‌ಗಳಲ್ಲಿ ಮೃತ ಜಾನುವಾರುಗಳ ಕಳೇಬರಗಳನ್ನೂ ಸಾಗಣೆ ಮಾಡುವ ಮೂಲಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಆಡಳಿತಕ್ಕೆ ಸಡ್ಡು ಹೊಡೆಯುತ್ತಿದ್ದಾರೆ.

ಇತ್ತೀಚಿಗೆ ಕೇರಳದಿಂದ ಬಂದ ಕಂಟೈನರ್ (ಕೆಎ 54 9853) ಗುಂಡ್ಲುಪೇಟೆ ಪುರಸಭೆಯ ಘನತ್ಯಾಜ್ಯ ಘಟಕದ ಪಕ್ಕದ ಜಮೀನಿನಲ್ಲಿ ಅಕ್ರಮ ದಂಧೆ ನಡೆಯುವ ಸ್ಥಳಕ್ಕೆ ಬಂದು ಸತ್ತ ಜಾನುವಾರುಗಳನ್ನು ಇಳಿಸಿ ವಾಪಸ್ ತೆರಳುವಾಗ ಕೆಸರಿನಲ್ಲಿ ಚಕ್ರಗಳು ಹೂತುಕೊಂಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಯುವಕರು ಸ್ಥಳಕ್ಕೆ ಹೋಗುತ್ತಿದ್ದಂತೆ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಲಾರಿ ಹೂತು ಹೋದ ಸ್ಥಳದಲ್ಲಿ ಹತ್ತಾರು ಜನರು ಮೃತ ಜಾನುವಾರುಗಳ ಚರ್ಮ, ಮಾಂಸ ಹಾಗೂ ಮೂಳೆಗಳನ್ನು ಪ್ರತ್ಯೇಕಿಸಿ ಒಣಗಿಸುತ್ತಿರುವುದು ಕಂಡುಬಂದಿದೆ. ಈ ವಿಷಯವನ್ನು ಸ್ಥಳೀಯರು ಕೂಡಲೇ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಅಧಿಕಾರಿಗಳು ಯಾವುದೇ ರೀತಿಯಾಗಿ ಸ್ಪಂದಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
'ಪುರಸಭೆಯವರು ಲಿಖಿತವಾಗಿ ದೂರು ಕೊಟ್ಟರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಅಕ್ರಮ ನಡೆಯುವ ಸ್ಥಳ ನಮಗೆ ಸೇರಿಲ್ಲ. ಆದ್ದರಿಂದ ನಾವು ಆ ಬಗ್ಗೆ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪುರಸಭೆ ನುಣುಚಿಕೊಳ್ಳುತ್ತಿದೆ. ಮೂಲೆಹೊಳೆ ಹಾಗೂ ಮದ್ದೂರು ಚೆಕ್‌ಪೋಸ್ಟ್‌ಗಳಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದ ಪ್ರತಿ ದಿನವೂ ತ್ಯಾಜ್ಯಗಳು ಕೇರಳದಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಬರುತ್ತಿವೆ. ಹಾಗಾದರೆ ಈ ದಂಧೆಯ ಹಿಂದೆ ಯಾರು ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ತರಬೇಕು' ಎಂದು ಮುಖಂಡ ಹುಲಸಗುಂದಿ ಮುತ್ತಣ್ಣ ಆಗ್ರಹಿಸಿದ್ದಾರೆ.
ಜಾನುವಾರುಗಳ ಮಾಂಸ ಹಾಗೂ ಚರ್ಮವನ್ನು ಒಣಗಿಸಿ ಮಾರಾಟ ಮಾಡಲಾಗುತ್ತಿದೆ. ಮಾಂಸವನ್ನು ಕೆ.ಜಿಗೆ 150 ರೂ.ನಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಮಾರಾಟ ಮಾಡಿದರೆ, ಕಸಾಯಿಖಾನೆಯಿಂದ ಖರೀದಿಸಿದ ಪ್ರಾಣಿಗಳ ಕೊಂಬು ಹಾಗೂ ಮೂಳೆಗಳನ್ನು ಪುಡಿಮಾಡಿ ಟೂತ್‌ಪೇಸ್ಟ್ ತಯಾರಿಕಾ ಘಟಕಗಳಿಗೆ ಸರಬರಾಜು ಮಾಡಲಾಗುತ್ತಿದೆ ಎನ್ನುವ ಆರೋಪ ಜೋರಾಗಿ ಕೇಳಿ ಬಂದಿದೆ.












Click it and Unblock the Notifications