ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮ ರಥೋತ್ಸವ ಸಂಪನ್ನ
ಚಾಮರಾಜನಗರ, ಏಪ್ರಿಲ್, 04: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಶ್ರೀ ಹಿಮವಾದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ (ಏಪ್ರಿಲ್ 04) ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ವಿಶೇಷ ಎಂದರೆ, ಹಂಬಿನಿಂದ ಇಲ್ಲಿ ರಥವನ್ನು ಎಳೆಯುತ್ತಾರೆ. ಅದರಂತೆಯೇ, ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮಸ್ಥರು ಕಾಡಿನಲ್ಲಿ ಸಿಗುವ ಒತ್ತರದ ಹಂಬುಗಳನ್ನು ತಂದು ಹಗ್ಗ ತಯಾರಿಸಿದ್ದರು. ಹೊನ್ನೇಗೌಡನಹಳ್ಳಿ ಗ್ರಾಮಸ್ಥರು ತೇರಿಗೆ ಬೇಕಾದ ಬೊಂಬುಗಳನ್ನು ತಂದು ರಥವನ್ನು ತಯಾರು ಮಾಡಿದ್ದು, ಸಾವಿರಾರು ಭಕ್ತರು ಹಂಬಿನಿಂದ ರಥ ಎಳೆದು ಪುನೀತರಾದರು.

ಭಕ್ತರಿಗೆ ದೇವರ ದರ್ಶನ ಪಡೆಯಲು ಬೆಟ್ಟದ ತಪ್ಪಲಿನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಬೇಸಿಗೆ ಅವಧಿ ಆಗಿದ್ದರಿಂದ ಕಾಡ್ಗಿಚ್ಚಿನ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು.
ದೇವರಿಗೆ ಕೆಂಡ ನೈವೇದ್ಯ: ಜಾನಪದ ನಾಡು ಚಾಮರಾಜನಗರವು ವೈವಿಧ್ಯಮಯ ಜಾತ್ರೆ, ಆಚರಣೆಯಿಂದ ಗಮನ ಸೆಳೆಯುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆಯೇ ನಿಗಿನಿಗಿ ಕೆಂಡ ದೇವರಿಗೆ ನೈವೇದ್ಯವಾಗಿ ಅರ್ಪಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಬಾಣಹಳ್ಳಿ ಗ್ರಾಮದಲ್ಲಿ ಸತ್ಯವತಿ ದೇವರ ದೇಗುಲವಿದ್ದು, ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಕೆಂಡವನ್ನು ಹಾಯುವುದು ಎಲ್ಲೆಡೆ ಸಾಮಾನ್ಯ. ಆದರೆ ಇಲ್ಲಿ, ಕೆಂಡವನ್ನು ಬರಿಗೈಯಲ್ಲಿ ಕೊಳಗಕ್ಕೆ ತುಂಬಿ ಬಳಿಕ ಬಿಳಿ ಬಟ್ಟೆಗೆ ಕೆಂಡ ಸುರಿದು ದೇವರಿಗೆ ನೈವೇದ್ಯ ಇಡುವುದು ಇಲ್ಲಿನ ವಿಶೇಷವಾಗಿದೆ.
ರೋಮಾಂಚಕಕಾರಿಯಾದ ಈ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಅತೀಂದ್ರಿಯ ಶಕ್ತಿಗೆ ತಲೆ ಬಾಗಿದ್ದಾರೆ. ಬರಿಗೈಯಲ್ಲಿ ಕೆಂಡ ಸುರಿದರೂ ಅರ್ಚಕನ ಕೈ ಸುಡುವುದಿಲ್ಲವಂತೆ, ಬಟ್ಟೆಯ ಜೋಳಿಗೆಗೆ ಏನೂ ಆಗುವುದಿಲ್ಲ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕುವ ಈ ಆಚರಣೆ ಸತ್ಯವತಿ ದೇವರ ಪವಾಡ ಎಂಬುದು ಜನರ ನಂಬಿಕೆ ಆಗಿದೆ.
ಭಕ್ತಿ ಶ್ರದ್ಧೆಯಿಂದ ನೆರವೇರಿದ ಕೊಂಡೊತ್ಸವ: ಈ ದೇವಾಲಯಕ್ಕೆ ಮಹಿಳೆಯರು ತೆರಳಿದರೇ ಕಲ್ಲಾಗುತ್ತಾರೆ ಎಂಬ ನಂಬಿಕೆ ಇರುವುದರಿಂದ ಹಾಗೂ ಮಹಿಳೆಯರಿಂದ ಅಂತರ ಕಾಯ್ದುಕೊಂಡು ದೇವರು ತಪಸ್ಸಿಗೆ ಕುಳಿತಿರುವ ಐತಿಹ್ಯ ಇರುವ ಈ ದೇವಾಲಯದಲ್ಲಿ ಸಡಗರದಿಂದ ಜಾತ್ರೆ ನಡೆಯುತ್ತಿದೆ.
ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಜಾತ್ರೆ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ ಭಕ್ತಿ ಶ್ರದ್ಧೆಯಿಂದ ಕೊಂಡೊತ್ಸವ ನೆರವೇರಿದೆ.
ಒಂದು ರೀತಿ ಪುರುಷ ಭಕ್ತರ ಜಾತ್ರೆ ಇದಾಗಿದ್ದು, ಜಾತ್ರೆಗೆ, ದೇವರ ದರ್ಶನಕ್ಕೆ ಮಹಿಳೆಯರ ಪ್ರವೇಶ ಇರುವುದಿಲ್ಲ. ಎರಡು ರಾಜ್ಯಗಳಿಂದ ಕೊಂಗಳ್ಳಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನಸ್ವಾಮಿಯ ಮಹಾನ್ ತಪಸ್ಸು ಮಾಡಲು ಈ ಪ್ರದೇಶ ಆರಿಸಿಕೊಂಡಿದ್ದರಿಂದ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ. ವರ್ಷಕ್ಕೆಮ್ಮೆ ಮಾತ್ರ ಊರಿನಲ್ಲಿ ಉತ್ಸವ ನಡೆಯಲಿದ್ದು, ಗ್ರಾಮಕ್ಕೆ ದೇವರ ಉತ್ಸವ ಮೂರ್ತಿ ತೆರಳಿದ ವೇಳೆ ಮಾತ್ರ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವ ವಿಶಿಷ್ಠ ಸಂಪ್ರದಾಯ ಇಲ್ಲಿನದ್ದಾಗಿದೆ.












Click it and Unblock the Notifications