ಕರ್ನಾಟಕದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಸ್ಥಗಿತ, ಏಕೆ?, ವಿವರ ಇಲ್ಲಿದೆ
ಚಾಮರಾಜನಗರದ, ಮಾರ್ಚ್, 10: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಇಂದು ಕಾರ್ಮಿಕರ ಮುಷ್ಕರದ ಬಿಸಿ ತಟ್ಟಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಇಂದು ಸ್ಥಗಿತಗೊಂಡಿದೆ. ಕಾರ್ಖಾನೆಗಳು ಸ್ಥಗಿತಗೊಳ್ಳುವುದಕ್ಕೆ ಕಾರಣ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಾರ್ಮಿಕರು ಕಳೆದ ತಿಂಗಳಿನಿಂದ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಾರ್ಖಾನೆ ಆಡಳಿತ ಮಂಡಳಿ ಯಾವುದಕ್ಕೂ ಬಗ್ಗದ ಕಾರಣ ಕರ್ತವ್ಯಕ್ಕೆ ಹಾಜರಾಗದೇ ಶುಕ್ರವಾರ (ಮಾರ್ಚ್ 10) ಧರಣಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳು ಸ್ಥಗಿತಗೊಂಡಿವೆ.

ಕಾರ್ಮಿಕರ ಒತ್ತಾಯವೇನು?
2018ರಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಸರ್ಕಾರ ಹಾಗೂ ಮಾಲೀಕರ ವಿಳಂಬ ನೀತಿಯಿಂದ ನಾಲ್ಕು ವರ್ಷ ತಡವಾಗಿ 2022 ಜುಲೈನಲ್ಲಿ ವೇತನ ಪರಿಷ್ಕರಣೆ ಆಗಿದೆ. 2022ರ ವೇತನ ಪರಿಷ್ಕರಣೆಗೆ ಅನುಸಾರವಾಗಿ ಸಂಬಳ ನೀಡಬೇಕೆಂಬುದು ಕಾರ್ಮಿಕರ ಒತ್ತಾಯವಾಗಿದೆ. ಆದರೆ, ಇದಕ್ಕೆ ಸಕರಾತ್ಮಕವಾಗಿ ಒಪ್ಪದ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಬಗ್ಗೆ ಚಾಕಾರವನ್ನೇ ಎತ್ತುತ್ತಿಲ್ಲ.
ಕಳೆದ 10 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಆದ್ದರಿಂದ ಕಾರ್ಮಿಕರು ಇಂದು ಕೆಲಸ ಬಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದಾರೆ. ಪರಿಣಾಮ ಎರಡೂ ಕಾರ್ಖಾನೆಗಳು ಸ್ಥಗಿತಗೊಂಡಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ
ಇನ್ನು ಚಾಮರಾಜನಗರ ತಾಲೂಕಿನ ಶಂಕರದೇವನ ಬೆಟ್ಟದಲ್ಲಿ ಇಂದು ಬಿಜೆಪಿ ಗ್ರಾಮಾಂತರ ಮಂಡಲ ಮತ್ತು ಮಹಾಶಕ್ತಿ ಕೇಂದ್ರಗಳ ಪ್ರಮುಖರ ಸಭೆ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಟಿಕೆಟ್ ಆಕಾಂಕ್ಷಿಯಾಗಿ ಓಡಾಡುತ್ತಿರುವ ವಿಜಯೇಂದ್ರ ಆಪ್ತ, ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿದ್ದು, ಇದನ್ನು ತಡೆಯಬೇಕು. ರುದ್ರೇಶ್ ಅವರಿಂದ ಪಕ್ಷದ ಕಾರ್ಯಕರ್ತರು ಇಬ್ಭಾಗ ಆಗುತ್ತಿದ್ದು, ಭವಿಷ್ಯದಲ್ಲಿ ಪಕ್ಷ ಸಂಘಟಿಸಲು ಹರಸಾಹಸಪಡಬೇಕಾಗುತ್ತದೆ ಅಂತಲೂ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರಿಗೆ ಈ ಬಾರಿ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ, ಮುಖಂಡರಾದ ರಾಮಚಂದ್ರು, ನಿಜಗುಣರಾಜು ಸಮ್ಮುಖದಲ್ಲಿ ಒತ್ತಾಯಿಸಲಾಗಿದೆ.












Click it and Unblock the Notifications