ಚಾಮರಾಜನಗರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬಿ.ಎಲ್.ಸಂತೋಷ್ ನೀಡಿದ ಸಲಹೆಗಳಿವು, ಇಲ್ಲಿದೆ ವಿವರ
ಬಿ.ಎಲ್.ಸಂತೋಷ್ ಚಾಮರಾಜನಗರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವೆಲ್ಲ ಸೂಚನೆಗಳನ್ನು ನೀಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಚಾಮರಾಜನಗರ, ಫೆಬ್ರವರಿ, 23: ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದಿತ್ತು. ಬಳಿಕ ಚಾಮರಾಜನಗರಕ್ಕೆ ರಾಜಕೀಯ ಚಾಣಕ್ಯ ಬಿ.ಎಲ್.ಸಂತೋಷ್ ಎಂಟ್ರಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ. ಹಾಗಾದರೆ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವೆಲ್ಲ ಸೂಚನೆಗಳನ್ನು ಕೊಟ್ಟಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ್ದರು. ಸಭೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್, ಬಿಜೆಪಿ ಶಾಸಕರಾದ ಎನ್.ಮಹೇಶ್, ನಿರಂಜನಕುಮಾರ್, ಟಿಕೆಟ್ ಆಕಾಂಕ್ಷಿಗಳಾದ ಎಂ.ರಾಮಚಂದ್ರು, ನಿಶಾಂತ್, ವೆಂಕಟೇಶ್, ಡಾ.ಪ್ರೀತಂ ಹಾಗೂ ಮಂಡಲ ಪ್ರಮುಖರು ಸೇರಿದಂತೆ ಪಕ್ಷದ ಇತರೆ ಪದಾಧಿಕಾರಿಗಳು ಭಾಗಿಯಾಗಿದ್ದರು.

ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ
ಸಭೆಯಲ್ಲಿ ಸಂತೋಷ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ ರಥವನ್ನು ಬೇರೆ ಪಕ್ಷಗಳಂತೆ ಒಬ್ಬರು-ಇಬ್ಬರು ಎಳೆಯುವುದಿಲ್ಲ. ಕಾರ್ಯಕರ್ತರೇ ತೊಡಗಿ ಗೆಲುವನ್ನು ತರುತ್ತಾರೆ. ನಮ್ಮದು ಪುರಿ ಜಗನ್ನಾಥನ ರೀತಿ ರಥವನ್ನು ಲಕ್ಷಾಂತರ ಮಂದಿ ಎಳೆಯುತ್ತಾರೆ. ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು ಎಂದು ಪ್ರಮುಖರಿಗೆ ಕರೆ ಕೊಟ್ಟಿದ್ದಾರೆ.
ಕಾರ್ಯಕರ್ತರಿಗೆ ಸಂತೋಷ್‌ರಿಂದ ಕ್ಲಾಸ್
ಓರ್ವ ಅಭ್ಯರ್ಥಿ ಮೇಲೆ ಎಲ್ಲರದ್ದೂ ಒಂದೊಂದು ಅಭಿಪ್ರಾಯ ಇರಲಿದೆ. 4 ಸಾವಿರ ಆಕಾಂಕ್ಷಿಗಳಿದ್ದು, 4 ಸಾವಿರ ಅಭಿಪ್ರಾಯಗಳು ಇರುತ್ತವೆ. ಪಕ್ಷ ಯಾರನ್ನೂ ಆಯ್ಕೆ ಮಾಡುತ್ತದೆಯೋ ಅವರಿಗೆ ನಮ್ಮ ಬೆಂಬಲ ಇರಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬೂತ್ ಮಟ್ಟ ಎಂದರೆ ಭಾಷಣ ಮಾಡುವಂತಹದ್ದಲ್ಲ. ಕೆಲಸ ಮಾಡುವ ಹಂತ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಅನಿವಾಸಿ ಮತದಾರರ ಕಡೆ ಗಮನಹರಿಸಿ
ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ಇರುತ್ತದೆ. ಆದರೆ ಆ ವ್ಯಕ್ತಿ ಬೇರೆಲ್ಲೋ ಇರುತ್ತಾರೆ. ಒಂದೊಂದು ಊರಿನಲ್ಲೂ ಈ ಅನಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಬಿಜೆಪಿ ಕಾರ್ಯಕ್ರಮಗಳನ್ನು ತಿಳಿಸಿ ಮತದಾನದಿಂದ ಅವರು ಹೊರಗುಳಿಯದಂತೆ ಮಾಡಿ. ಈ ಮೂಲಕ ಅವರನ್ನು ಬಿಜೆಪಿ ಮತದಾರರನ್ನಾಗಿಸಬೇಕು ಎಂದರು.

ನಮ್ಮ ಬಿಜೆಪಿಗೆ ಇಂತಿಷ್ಟು ಮತ ಬ್ಯಾಂಕ್ ಎಂದು ಇದ್ದೇ ಇರಲಿದೆ. ಅದಕ್ಕೆ ಜನರನ್ನು ಸೇರಿಸುತ್ತಾ ಹೋಗಬೇಕೆ ಹೊರತು, ಡಿಲಿಟ್ ಮಾಡಬಾರದು. ಬೂತ್ ಮಟ್ಟದಲ್ಲಿ ಭಾಷಣ ಮಾಡಬೇಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಕೆಲಸಗಳ ಬಗ್ಗೆ ವಿವರಿಸಿ ಎಂದು ಪಕ್ಷದ ಪ್ರಮುಖರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮುಂಬರುವ ಚುನಾವಣೆ ಕಾಂಗ್ರೆಸ್‌ಗೆ ಮದ್ದು ಅರಿಯುವ ಚುನಾವಣೆ ಎಂದು ವ್ಯಾಖ್ಯಾನಿಸಿದರು. ಟಿಪ್ಪು ಕೂಡ ಹುಟ್ಟಿದ್ದು ದೇವನಹಳ್ಳಿ ತಾಲೂಕಿನಲ್ಲೇ. ಆದರೆ ಕೆಂಪೇಗೌಡರನ್ನು ಮತ್ತೇ ನೆನಪಿಸಲು ಬಿಜೆಪಿ ಬರಬೇಕಾಯಿತು. ರಾಣಿ ಅಬ್ಬಕ್ಕ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಲು ಬಿಜೆಪಿ ಬರಬೇಕಾಯಿತು ಎಂದು ಕಾಂಗ್ರೆಸ್ ಪಾಳಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಪ್ಲಾನ್ ಹೇಗಿದೆ?
ಹಳೇ ಮೈಸೂರು ಭಾಗವನ್ನು ಕಮಲದ ತೆಕ್ಕಗೆ ಪಡೆಯಬೇಕೆಂದು ಈಗಾಗಲೇ ಬಿಜೆಪಿ ಉನ್ನತ ಮಟ್ಟದ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಹಾಗೆಯೇ ಚಾಮರಾಜನಗರದಲ್ಲಿ ಬಿ.ಎಲ್. ಸಂತೋಷ್ ನಡೆಸಿದ ಸಭೆ ಮಹತ್ವ ಪಡೆದುಕೊಂಡಿದೆ. ಜೊತೆಗೆ, ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ ಕೆಲವು ಮಹತ್ವಪೂರ್ಣ ಸಲಹೆಗಳನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications