ಮಲೆ ಮಾದಪ್ಪನ ಬೆಟ್ಟದಲ್ಲಿ ನೂತನ ತಂತ್ರಜ್ಞಾನದ ಸಿಸಿ ಕ್ಯಾಮೆರಾಗಳ ಅಳವಡಿಕೆ-ಕಾರಣ ಏನು?
ಚಾಮರಾಜನಗರ, ನವೆಂಬರ್, 11: ಪ್ರಸಿದ್ಧ ಯಾತ್ರ ಸ್ಥಳಗಳಲ್ಲೊಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ತಂತ್ರಜ್ಞಾನದ ಕ್ಯಾಮರಾಗಳನ್ನು ಇಂದಿನಿಂದ ಅಳವಡಿಸಲಾಗುತ್ತಿದೆ. ಇದರಿಂದ ಭಕ್ತರ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಹಾಗಾದರೆ ಯಾವ್ಯಾವ ಸ್ಥಳಗಳಲ್ಲಿ ಅಳವಡಿಕೆ ಮಾಡಲಾಗಿದೆ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರ ದೇವಾಲಯದ ಹೊರಾಂಗಣ, ರಂಗ ಮಂದಿರ, ವಿಶೇಷ ಪ್ರವೇಶ ದ್ವಾರ, ಪಾಲಾರ್ ರಸ್ತೆ, ಕೊಳ್ಳೇಗಾಲ ರಸ್ತೆಗಳಲ್ಲಿ ವಿನೂತನ ಮಾದರಿಯ ಕೌಂಟಿಂಗ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸಿ.ಸಿ ಕ್ಯಾಮರಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹಾಗೂ ಪ್ರತಿಯೊಂದು ವಾಹನಗಳನ್ನು ಸ್ಕ್ಯಾನ್ ಮಾಡಲಿದೆ.

ಶ್ರೀ ಕ್ಷೇತ್ರದಲ್ಲಿ ಕಳ್ಳತನ ತಡೆಯುವ ನಿಟ್ಟಿನಲ್ಲಿ ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ವಿನೂತನ ಮಾದರಿಯ ಕೌಂಟಿಂಗ್ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಒನ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ಪವಾಡ ಪುರುಷ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ-ವಿಧಾನಗಳೊಂದಿಗೆ ಸಂಪ್ರದಾಯದಂತೆ ನೆರವೇರಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ತಿಕ ಮಾಸದ ಎರಡನೇ ಸೋಮವಾರ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತ್ರತ್ವದಲ್ಲಿ ನಡೆಯಿತು. ಬೇಡಗಂಪಣ ಸರದಿ ಅರ್ಚಕರ ಅಧ್ಯಕ್ಷತೆಯಲ್ಲಿ ಮಹದೇಶ್ವರನಿಗೆ ಮುಂಜಾನೆಯಿಂದಲೇ ಬಿಲ್ವಪತ್ರೆ, ಹಾಲು-ಮೊಸರು ಸೇರಿದಂತೆ ಇನ್ನಿತರ ಅಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮಗಳು, ದೂಪದ ಸೇವೆ, ಮಹಾಮಂಗಳಾರತಿ ಸಂಭ್ರಮ ಸಡಗರದಿಂದ ನಡೆಯಿತು.
ಗಮನಸೆಳೆದ ವಿಶೇಷ ಅಲಂಕಾರ: ಎರಡನೇ ಕಾರ್ತಿಕ ಸೋಮವಾರದ ಪ್ರಯುಕ್ತ ಟಿ.ನರಸೀಪುರ ಗ್ರಾಮದ ಎಂ.ಮಾದೇಶ್ ಮಹದೇಶ್ವರ ಸ್ವಾಮಿ ಸನ್ನಿಧಿಯ ಗರ್ಭಗುಡಿ, ಪ್ರಾಂಗಣ, ಚಪ್ಪರಮಳಿಗೆ ಗಣಪತಿ ದೇವಾಲಯ, ಆಲಂಬಾಡಿ ಬಸವ, ಹುಲಿ ವಾಹನ ರುದ್ರಾಕ್ಷಿ ಮಂಟಪ ಬಸವ ವಾಹನ ಸಾಲೂರು ಮಠಕ್ಕೆ ವಿಶೇಷ ಫಲ ಪುಷ್ಪಗಳಿಂದ ಅಲಂಕಾರ ಮಾಡಿಸಿದ್ದರು.
ವಿಶೇಷ ದಾಸೋಹ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಕಾರ್ತಿಕ ಮಾಸದ ಎರಡನೇ ಸೋಮವಾರ ಪ್ರಯುಕ್ತ ನಂಜನಗೂಡು ತಾಲೂಕು ಆಲತ್ತೂರು ಗ್ರಾಮದ ನಂಜುಂಡಸ್ವಾಮಿ ರವರು ದಾಸೋಹ ಸೇವಾರ್ಥ ವಿಶೇಷ ಪೂಜೆ ಮಾಡಿಸಿದ್ದಾರೆ. ಸೋಮವಾರ ಮಧ್ಯಾಹ್ನ ಸುಮಾರು 10,000ಕ್ಕೂ ಅಧಿಕ ಭಕ್ತರು ಮಧ್ಯಾಹ್ನದ ಪ್ರಸಾದ ಸ್ವೀಕರಿಸಿದ್ದಾರೆ. ಬಂದಿದ್ದ ಭಕ್ತರಿಗೆ ಅನ್ನ-ಸಾಂಬಾರ್ ಪಾಯಸ, ಕಡ್ಲೆಹುಳಿ, ಮಜ್ಜಿಗೆ ಹುಳಿ ಸೇರಿದಂತೆ 10 ಕ್ವಿಂಟಾಲ್ ಅಕ್ಕಿ ಬಳಸಿ ಪ್ರಸಾದ ತಯಾರಿಸಿದ್ದರು.












Click it and Unblock the Notifications