ಗುಂಡ್ಲುಪೇಟೆ: ದಂಪತಿಯನ್ನು 300 ಮೀಟರ್‌ನಷ್ಟು ದೂರ ಎಳೆದೊಯ್ದ ಟಿಪ್ಪರ್ ಲಾರಿ-ಬೆಚ್ಚಿ ಬೀಳಿಸುತ್ತಿದೆ ಸಿಸಿಟಿವಿ ದೃಶ್ಯ
ಚಾಮರಾಜನಗರ, ಸೆಪ್ಟೆಂಬರ್, 18: ಮಂಗಳವಾರ (ಸೆಪ್ಟೆಂಬರ್ 18) ಟಿಪ್ಪರ್ ಹಾಗೂ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಮಗು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ನಡೆದಿತ್ತು. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟಿಪ್ಪರ್ ಚಾಲಕನ ಚಾಲನೆ ಬೆಚ್ಚಿ ಬೀಳಿಸುವಂತಿದೆ.
ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬೈಕ್ ಸಮೇತ ಇಬ್ಬರು ಲಾರಿಯಡಿ ಸಿಲುಕಿದ್ದರೂ 300 ಮೀಟರ್‌ನಷ್ಟು ದೂರ ಟಿಪ್ಪರ್ ಚಾಲನೆ ಮಾಡಲಾಗಿದೆ. ಇನ್ನು ಇದನ್ನು ಕಂಡ ಟೀ ಅಂಗಡಿ-ಬೇಕರಿಗಳಲ್ಲಿ ಕೂತಿದ್ದವರು ಹೌಹಾರಿ ಕೂಗಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಭಯಾನಕ ದೃಶ್ಯ ಕಂಡು ಟಿಪ್ಪರ್ ನಿಲ್ಲಿಸಲು ಲಾರಿ ಹಿಂದೆ ಜನರು ಕೂಗಾಡಿ ಓಡುತ್ತಿರುವ ದೃಶ್ಯ ಸೆರೆಯಾಗಿದ್ದು, ಡೆಡ್ಲಿ ಅಪಘಾತ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಇನ್ನು, ಈ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 766(ಕ್ಯಾಲಿಕಟ್ ರಸ್ತೆ)ರಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಕೇರಳ ಮೂಲದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು.ಸುಲ್ತಾನ್ ಬತ್ತೇರಿ ತಾಲೂಕಿನ ಮಲವಾಯಿಲ್ ಗ್ರಾಮದ ಧನೇಶ್‍ಮೋಹನ್(29), ಅಂಜು(24) ಮತ್ತು ಮಗು ವಿಚ್ಚು(2) ಮೃತರು.
ದಂಪತಿ ಬೈಕ್‍ನಲ್ಲಿ ಕೇರಳ ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದರು. ಕೂತನೂರು ಗುಡ್ಡದಿಂದ ಗ್ರಾವಲ್ ತುಂಬಿಕೊಂಡು ಬರುತ್ತಿದ್ದ ಮಂಡ್ಯ ಮೂಲದ ಕೆ-ಎ-11-ಬಿ-8497 ನೋಂದಣಿಯ ಟಿಪ್ಪರ್ ಹಿಂಬದಿಯಿಂದ ಡಿಕ್ಕಿಯಾಗಿ ಈ ಘಟನೆ ಸಂಭವಿಸಿತ್ತು.
ಚಾಲಕ ಟಿಪ್ಪರ್ ಅನ್ನು ಕುಡಿದ ಮತ್ತಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಭಾರ ಹೊತ್ತ ವಾಹನ ಸಾಗುವಾಗ ಅಜಾರೂಕ ಚಾಲನೆ ಮಾಡಿದ್ದಾನೆ. ಬೈಕ್‍ಗೆ ಡಿಕ್ಕಿಯಾದ ನಂತರವೂ ಟಿಪ್ಪರ್ ಅನ್ನು ನಿಯಂತ್ರಿಸದ ಕಾರಣ 300 ಮೀಟರ್ ದೂರದವರೆಗೆ ಮೃತದೇಹಗಳನ್ನು ಟಿಪ್ಪರ್ ಎಳೆದೋಯ್ದಿದೆ.
ಇನ್ನು ಗುಂಡ್ಲುಪೇಟೆ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್ ಸವಾರ ಸ್ಥಳದಲ್ಲೇ ಸಾವು: ಮಹೀಂದ್ರಾ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗಡಿಜಿಲ್ಲೆ ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದ ಸಮೀಪ ನಡೆದಿದೆ. ಹಾಗಾದರೆ ಮೃತರ ಮೂಲ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ನಿವಾಸಿ ಪ್ರವೀಣ್(25) ಮೃತ ದುರ್ದೈವಿ. ಇವರಿಗೆ ಮದುವೆಯಾಗಿ ಒಂದೂವರೆ ವರ್ಷವಾಗಿದ್ದು, 2 ತಿಂಗಳ ಮಗು ಇದೆ ಎಂದು ತಿಳಿದುಬಂದಿದೆ. ಇನ್ನು ಅಪಘಾತ ಸ್ಥಳದಲ್ಲೇ ಮಗುವಿಗೆ ಕೊಂಡೊಯ್ತುತ್ತಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತಮಿಳುನಾಡಿನಿಂದ ಬರುತ್ತಿದ್ದ ಬೊಲೆರೊ ವಾಹನ ಚಾಲಕ ಬೈಕ್‌ಗೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರವೀಣ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಪಘಾತ ಆಗುತ್ತಿದ್ದಂತೆ ಪೊಲೀಸ್ ಹಾಗೂ ಆ್ಯಂಬುಲೆನ್ಸ್ ತಡವಾಗಿ ಬಂತೆಂದು ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪದೇ ಪದೇ ಅಪಘಾತ ಸಂಭವಿಸುತ್ತಿವೆ ಎಂದು ಆಕ್ರೋಶಗೊಂಡ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.












Click it and Unblock the Notifications