ಬಿಆರ್‌ಟಿಯಲ್ಲಿ ಎರಡು ಕಾಡಾನೆಗಳ ಕಳೇಬರಗಳು ಪತ್ತೆ: ಪರಿಸರ ಹೋರಾಟಗಾರ ರೊಚ್ಚಿಗೆದ್ದಿದ್ದೇಕೆ?
ಚಾಮರಾಜನಗರ, ಆಗಸ್ಟ್, 30: ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯ ಮತ್ತು ಯಳಂದೂರು ವನ್ಯಜೀವಿ ವಲಯ ವಿಭಾಗದಲ್ಲಿ 2 ಕಾಡಾನೆಗಳ ಕಳೇಬರಗಳು ಪತ್ತೆಯಾಗಿದೆ. ಹಾಗಾದರೆ ಈ ಆನೆಗಳ ವಯಸ್ಸು ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೈಲೂರು ವಲಯದ ಆಳದ ಕೆರೆ ಬಳಿ 45-50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದ್ದು, 7-8 ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇನ್ನು ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, ಇದು 20 ದಿನಗಳ ಹಿಂದೆ ಮೃತಪಟ್ಟಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎರಡು ಆನೆಗಳ ದಂತಗಳು ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದೆ.

ಇನ್ನು ಆನೆ ಕಳೇಬರ ಪತ್ತೆ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದು, ಒಂದಾನೆ ಮೃತಪಟ್ಟು 7-8 ತಿಂಗಳು, ಮತ್ತೊಂದು ಆನೆ ಸತ್ತು 20 ದಿನಗಳಾಗಿವೆ. ಇದು ಅರಣ್ಯ ಇಲಾಖೆಯ ಗಸ್ತಿನ ವೈಖರಿ ಎಂದು ಆಕ್ರೊಶ ಹೊರಹಾಕಿದರು.
ನಡುರಸ್ತೆಯಲ್ಲೇ ಹಸು ಕೊಂದ ಚಿರತೆ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹೊರವಲಯದ ರಸ್ತೆಯಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಬುಧವಾರ (ಆಗಸ್ಟ್ 14) ಮಟ.. ಮಟ.. ಮಧ್ಯಾಹ್ನ ನಡೆದಿದೆ. ಹಾಗಾದರೆ ಈ ಹಸು ಯಾರಿಗೆ ಸೇರಿದ್ದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸತ್ತೇಗಾಲ ಗ್ರಾಮದ ಕಲ್ಯಾಣಿ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಚಿರತೆ ದಿಢೀರ್ ಹಸುವಿನ ಮೇಲೆ ದಾಳಿ ಮಾಡಿ ಹಸುವನ್ನು ಕೊಂದಿದೆ.
ಗ್ರಾಮದ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ರೈತನ ಎದುರೇ ಮಧ್ಯಾಹ್ನ ನಡು ರಸ್ತೆಯಲ್ಲಿ ಚಿರತೆ ದಿಢೀರ್ ಹಸುವಿನ ಕುತ್ತಿಗೆಯನ್ನು ಹಿಡಿದು ರಕ್ತ ಕುಡಿಯುತ್ತಿತ್ತು. ಇದನ್ನು ಕಂಡ ರೈತರು ಜೋರಾಗಿ ಕೂಗಿ ದೊಣ್ಣೆಯನ್ನು ಎತ್ತಿಕೊಂಡು ಚಿರತೆಯ ಬಳಿ ಓಡಿ ಹೋದಾಗ ಗಾಬರಿಗೊಂಡ ಚಿರತೆ ಹಸುವಿನ ಕುತ್ತಿಗೆಯನ್ನು ಬಿಟ್ಟು ಜಮೀನ ಕಡೆ ಓಡಿಹೋಯಿತು.
"ನಮ್ಮ ಹಸು ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ. ಚಿರತೆ ಇದೆ ಎಂದು ಎಷ್ಟೇ ಮಾಹಿತಿ ನೀಡಿದರೂ ಸಹ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಅನಾಹುತ ಆದರೆ ಅರಣ್ಯ ಇಲಾಖೆಯವರೇ ನೇರ ಹೊಣೆಗಾರರಾಗುತ್ತಾರೆ," ಎಂದು ರೈತ ಮುಖಂಡ ಶೈಲೇಂದ್ರ, ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಅಕ್ಕಪಕ್ಕದ ಪ್ರದೇಶದಲ್ಲಿ ಬೋನನ್ನು ಇಟ್ಟಿದ್ದಾರೆ. ರಾತ್ರಿಯಿಡೀ ಚಿರತೆಗಾಗಿ ಕಾಯುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











Click it and Unblock the Notifications