ಮಲೆ ಮಾದಪ್ಪನ ಹುಂಡಿಗೆ ಹುಂಡಿಗೆ ಬಿದ್ದ ಹಣ ಎಷ್ಟು ಕೋಟಿ ಗೊತ್ತಾ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಡಿಸೆಂಬರ್, 02: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ (ಡಿಸೆಂಬರ್ 01) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 23 ದಿನಗಳ ಅವಧಿಯಲ್ಲಿ 2 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ (ಡಿಸೆಂಬರ್ 01) ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ಪ್ರಾರಂಭಿಸಲಾಗಿದ್ದು, ಎಣಿಕೆ ಕಾರ್ಯವು ಸಂಜೆ 7 ಗಂಟೆಯವರೆಗೂ ನಡೆಯಿತು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ಹಾಗೂ ಸರ್ಕಾರಿ ರಜೆ ದಿನಗಳು, ದೀಪಾವಳಿ ಜಾತ್ರಾ ಮಹೋತ್ಸವ ಕಾರ್ತಿಕ ಸೋಮವಾರ ಹಿನ್ನೆಲೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 2,00,41,724 ರೂಪಾಯಿ ಸಂಗ್ರಹವಾಗಿದೆ. ಕಳೆದ ತಿಂಗಳು ಚಿನ್ನದ ಮೌಲ್ಯಮಾಪಕರಿಗೆ ಅನಾರೋಗ್ಯ ಇದ್ದ ಹಿನ್ನೆಲೆ ಈ ಬಾರಿ ಮೌಲ್ಯಮಾಪನ ಮಾಡಲಾಗಿದೆ. ಕಳೆದ ತಿಂಗಳು ಚಿನ್ನ 24 ಗ್ರಾಂ, ಬೆಳ್ಳಿ ಒಂದು ಕೆ.ಜಿ. 915 ಗ್ರಾಂ ಸಂಗ್ರಹವಾಗಿದೆ. ಈ ಬಾರಿ ಚಿನ್ನ 76 ಗ್ರಾಂ ಮತ್ತು ಬೆಳ್ಳಿ ಒಂದು ಕೆ.ಜಿ. 514 ಗ್ರಾಂ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ನಾಗೇಶ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
2.8 ಕೋಟಿ ರೂಪಾಯಿ ಆದಾಯ ಸಂಗ್ರಹ
ಮಲೆಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 10ರಿಂದ 14 ರವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು, ಕೇವಲ ಈ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಈ ಸಂಬಂಧ ಮಾಹಿತಿ ನೀಡಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ 5 ದಿನಗಳ ಅವಧಿಯಲ್ಲಿ 2.8 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ ಹುಂಡಿ ಹಣ ಸೇರಿಲ್ಲ.
ಕಳೆದ 5 ದಿನಗಳ ಅವಧಿಯಲ್ಲಿ 1786 ಚಿನ್ನದ ರಥೋತ್ಸವ, 50 ಬೆಳ್ಳಿ ರಥೋತ್ಸವ, 1,114 ಬಸವ ವಾಹನ, 9135 ಹುಲಿ ವಾಹನ, 410 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಸಿದ್ದಾರೆ. ಇನ್ನು ಮಲೆ ಮಹದೇಶ್ವರ ಹುಲಿವಾಹನ ಉತ್ಸವಕ್ಕೆ ಅತಿ ಹೆಚ್ಚು ಭಕ್ತರು ಆಗಮಿಸಿದ್ದಾರೆ. ಈ ಉತ್ಸವಗಳಿಂದಲೇ 86 ಲಕ್ಷ ರೂಪಾಯಿ ಹಣ ಪ್ರಾಧಿಕಾರಕ್ಕೆ ಸಂದಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಲಾಡು ಮಾರಾಟದಿಂದ 54 ಲಕ್ಷ, ಮಿಶ್ರ ಪ್ರಸಾದದಿಂದ 8 ಲಕ್ಷ, ಪುದುವಟ್ಟು ಸೇವೆಯಿಂದ 2 ಲಕ್ಷ, ಸೇವೆಗಳಿಂದ 5 ಲಕ್ಷ, ಪ್ರಸಾದದ ಕ್ಯಾರಿ ಬ್ಯಾಗ್‌ನಿಂದಲೇ 72 ಸಾವಿರ ಹಣ ಬಂದಿದ್ದು, ಒಟ್ಟಾರೆ 5 ದಿನದ ಅವಧಿಯಲ್ಲಿ ಕ್ಷೇತ್ರಕ್ಕೆ 2,08,82,110 ರೂಪಾಯಿ ಆದಾಯ ಬಂದಿದೆ.
ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರೆಗಳಿಗೆ ಉಚಿತ ದರ್ಶನ, ವಸತಿ ಹಾಗೂ ದಾಸೋಹದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಸುಮಾರು 10,600ಕ್ಕೂ ಹೆಚ್ಚು ಕಾಲ್ನಡಿಗೆ ಭಕ್ತಾದಿಗಳು ಈ ಪಾಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರನ ದರ್ಶನ ಪಡೆಯುವ ಜೊತೆಗೆ ಕೋಟ್ಯಾಂತರ ರೂಪಾಯಿ ಆದಾಯವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ.












Click it and Unblock the Notifications