Gold: ₹7 ಲಕ್ಷ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ!
ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಲು ಹವಣಿಸುತ್ತಿರುವಾ ಚೀನಾಗೆ ಬಂಪರ್ ಲಾಟರಿ ಹೊಡೆದಿದೆ. ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಚಿನ್ನದ ಭಂಡಾರ ಈಗ ಚೀನಾ ಕೈಗೆ ಸಿಕ್ಕಿದೆ! ಹೌದು, ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಚೀನಾ ಪತ್ತೆಹಚ್ಚಿದೆ. ಈ ಚಿನ್ನದ ನಿಕ್ಷೇಪದಲ್ಲಿ ಸುಮಾರು 1,000 ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ಚಿನ್ನ ಸಿಗುತ್ತದೆ ಎನ್ನುವ ಅಂದಾಜಿದೆ.
ಚೀನಾದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಈ ಈವರೆಗೆ ವಿಶ್ವದಲ್ಲಿ ಪತ್ತೆಯಾಗಿರುವ ಅತಿ ದೊಡ್ಡ ಚಿನ್ನದ ನಿಕ್ಷೇಪವಾಗಿದೆ. ದಕ್ಷಿಣ ಆಫ್ರಿಕಾದ 900 ಮೆಟ್ರಿಕ್ ಟನ್ ಚಿನ್ನ ಹೊಂದಿರುವ ಗಣಿಗಳಿಗಿಂತ ಹೆಚ್ಚಿನ ಚಿನ್ನ ಹೊಂದಿದ್ದು, ಸುಮಾರು 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ($83 ಶತಕೋಟಿ) ಚಿನ್ನವನ್ನು ತೆಗೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಹುನಾನ್ ಪ್ರಾಂತ್ಯದ ಭೂವೈಜ್ಞಾನಿಕ ಇಲಾಖೆಯು ಚಿನ್ನದ ನಿಕ್ಷೇಪ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದೆ. ಪಿಂಗ್ಜಿಯಾಂಗ್ ಕೌಂಟಿಯಲ್ಲಿ ಈ ಚಿನ್ನದ ನಿಕ್ಷೇಪ ಇದೆ ಎಂದು ತಿಳಿಸಿದ್ದು, 2 ಕಿಲೋ ಮೀಟರ್ ಭೂಮಿಯ ಆಳದಲ್ಲಿ ಸುಮಾರು 40 ಚಿನ್ನದ ಬಂಡೆಗಳನ್ನು ಗುರುತಿಸಿರುವುದಾಗಿ ಭೂ ವಿಜ್ಞಾನಿಗಳು ತಿಳಿಸಿದ್ದಾರೆ.
ವಿವಿಧ ಭೌಗೋಳಿಕ ಪ್ರಕ್ರಿಯೆಗಳ ಮೂಲಕ ಚಿನ್ನದ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಲಕ್ಷಾಂತರ ವರ್ಷಗಳ ಖನಿಜ, ರಾಸಾಯನಿಕ ಚಟುವಟಿಕೆಗಳಿಂದ ಚಿನ್ನ ತಯಾರಾಗುತ್ತದೆ. ಚಿನ್ನದ ಲಭ್ಯತೆ ತುಂಬಾ ಕಡಿಮೆ ಇರುವ ಕಾರಣ ಬೆಲೆ ಹೆಚ್ಚಾಗಿದೆ. ಚಿನ್ನ ಎಂದರೆ ಬರೀ ಅಲಂಕಾರಿ ಆಭರಣವಲ್ಲ ಅದು ಆಪತ್ಕಾಲದ ಹೂಡಿಕೆ ಮತ್ತು ಉತ್ತಮ ಲಾಭ ತಂದುಕೊಡುವ ಹೂಡಿಕೆಯಾಗಿದೆ.
ಆರಂಭದ ಹಂತದಲ್ಲೇ ಸುಮಾರು 300 ಮೆಟ್ರಿಕ್ ಟನ್ ಚಿನ್ನ ಸಿಗಬಹುದು ಎಂದು ಪ್ರಾಥಮಿಕ ಪರೀಕ್ಷೆಗಳಲ್ಲಿ ತಿಳಿದುಬಂಇದೆ. ಮತ್ತಷ್ಟು ಆಳಕ್ಕೆ ಇಳಿದರೆ ಇನ್ನಷ್ಟು ಚಿನ್ನ ಸಿಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸುಮಾರು 3 ಕಿ.ಮೀ. ಆಳದವರೆಗೆ ಚಿನ್ನ ಇದೆ ಎಂದು ಅಂದಾಜಿಸಲಾಗಿದೆ.
ಭೂವೈಜ್ಞಾನಿಕ ಇಲಾಖೆಯ ಮುಖ್ಯಸ್ಥ ಚೆನ್ ರುಲಿನ್ ಚಿನ್ನದ ನಿಕ್ಷೇಪದ ಬಗ್ಗೆ ಮಾಹಿತಿ ನೀಡಿದ್ದು, ಪ್ರತಿ ಮೆಟ್ರಿಕ್ ಟನ್ ಅದಿರಿನಲ್ಲಿ 138 ಗ್ರಾಂನಷ್ಟು ಚಿನ್ನ ಸಿಗುತ್ತದೆ ಎಂದು ಹೇಳಿದರು. ಗಣಿಗಳಲ್ಲಿ ಒಂದು ಮೆಟ್ರಿಕ್ ಟನ್ ಅದಿರಿನಲ್ಲಿ 8 ಗ್ರಾಂಗಿಂತ ಹೆಚ್ಚಿನ ಚಿನ್ನ ಹೊಂದಿದ್ದರೆ ಅದನ್ನು ಉನ್ನತ ದರ್ಜೆಯ ನಿಕ್ಷೇಪ ಎಂದು ಹೇಳಲಾಗುತ್ತದೆ.
ಈ ನಿಕ್ಷೇಪದ ಮೂಲಕ ಚೀನಾ ಚಿನ್ನದ ಉದ್ಯಮದ ಮೇಲೆ ದೊಡ್ಡ ಪರಿಣಾಮ ಬೀಡಲಿದೆ. ಈಗಾಗಲೇ ಜಾಗತಿಕವಾಗಿ ಚಿನ್ನದ ಒಟ್ಟು ಉತ್ಪಾದನೆಯ 10% ಚೀನಾ ಉತ್ಪಾದಿಸುತ್ತದೆ. ವಿಶ್ವದ ಪ್ರಮುಖ ಚಿನ್ನದ ಪೂರೈಕೆದಾರ ಕೂಡ ಆಗಿದ್ದು, 2024ರಲ್ಲಿ ಚೀನಾ 2,000 ಟನ್‌ಗಳಿಗಿಂತ ಹೆಚ್ಚು ಮೀಸಲು ಚಿನ್ನವನ್ನು ಹೊಂದಿದೆ.












Click it and Unblock the Notifications