ಜಿಯೋ ಪರಿಣಾಮ : ವೋಡಾಫೋನ್, ಏರ್ಟೆಲ್ ಷೇರುಗಳು ಕುಸಿತ
ಮುಂಬೈ, ಜನವರಿ 03: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ಟೆಲ್, ವೋಡಾಫೋನ್ ಇಂಡಿಯಾ ಸಂಸ್ಥೆಗಳ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ರಿಲಯನ್ಸ್ ಜಿಯೋ ಮತ್ತೊಮ್ಮೆ ಯಶಸ್ವಿಯಾಗಿದೆ. ಇದರ ಪರಿಣಾಮ, ವೋಡಾಫೋನ್, ಏರ್ಟೆಲ್ ಷೇರುಗಳು ಕುಸಿತ ಕಂಡಿವೆ.
ಭಾರ್ತಿ ಏರ್ಟೆಲ್ ನ ಷೇರುಗಳು ಬಿಎಸ್ಇಯಲ್ಲಿ ದಿನದ ಆರಂಭದಲ್ಲಿ ಶೇ 1.5ರಷ್ಟು ಕುಸಿತ ಕಂಡು 307.95 ರು ಪ್ರತಿ ಷೇರಿನಂತೆ ಮಾರಾಟವಾಗಿದೆ.
ವೋಡಾಫೋನ್ ಷೇರುಗಳು ಶೇ 3.13 ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಜಿಯೋ ಷೇರುಗಳು ಕೂಡಾ 1,102.35 ರು ನಂತೆ ಶೇ 0.3ರಷ್ಟು ಕುಸಿತ ಕಂಡು ಕೆಲ ಕಾಲ ವಹಿವಾಟು ನಡೆಸಿತ್ತು, ಆದರೆ, ನಂತರ ಚೇತರಿಕೆ ಕಂಡಿತು.

ಅಕ್ಟೋಬರ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ ಸುಮಾರು 10.5 ಮಿಲಿಯನ್ ಗ್ರಾಹಕರನ್ನು ಸೇರಿಸಿಕೊಂಡಿದೆ. ವೋಡಾಫೋನ್ ಐಡಿಯಾ ಹಾಗೂ ಏರ್ಟೆಲ್ ಕ್ರಮವಾಗಿ 7.3 ಮಿಲಿಯನ್ ಹಾಗೂ 1.8 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ ಎಂದು ಟೆಲಿಕಾಂ ನಿಯಂತ್ರಕ ಪ್ರಾಧಿಕಾರ(ಟ್ರಾಯ್) ಮಾಹಿತಿ ನೀಡಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೋಡಾಫೋನ್ ಐಡಿಯಾ ಸಂಸ್ಥೆಗೆ 4,970 ಕೋಟಿ ರು ನಷ್ಟವಾಗಿದೆ. ಏರ್ಟೆಲ್ ಗೆ 118 ಕೋಟಿ ರು ಲಾಭ ಬಂದಿದೆ. ಈ ಎರಡು ಸಂಸ್ಥೆಗೆ ಹೋಲಿಸಿದರೆ ರಿಲಯನ್ಸ್ ಜಿಯೋಗೆ ಸುಮಾರು 681 ಕೋಟಿ ರು ಲಾಭ ಬಂದಿದೆ.












Click it and Unblock the Notifications