ಬಾಡಿಗೆಗೆ ದುಡ್ಡಿಲ್ಲ, ಬದುಕು ಕಟ್ಟಿಕೊಳ್ಳುವ ಛಲ:ಹೆಗಲ ಮೇಲೆ 15 ಕಿಲೋ ತೂಕದ ಸಂಪೂರ್ಣ ಕೆಫೆ ಹೊತ್ತು ಯುವಕನ ವ್ಯಾಪಾರ
ವಿದ್ಯಾಭ್ಯಾಸ ಮುಗಿಸಿದ ಅಷ್ಟೂ ಜನಕ್ಕೂ ತಾವು ಅಂದುಕೊಂಡ ಕೆಲಸ ಸಿಗಲೇ ಬೇಕು ಅಥವಾ ಸಿಕ್ಕೇ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಮತ್ತೊಂದೆಡೆ ಕಡಿಮೆ ಓದಿರುವ ಅಥವಾ ಬಡವರ ಮಕ್ಕಳು ಇನ್ನೊಬ್ಬರ ಕೈ ಕೆಳಗೆಯೇ ದುಡಿಯಬೇಕು ಎನನು ಅನಿವಾರ್ಯವೂ ಇಲ್ಲ. ತಾನು ತನ್ನ ಕಾಲಿನ ಮೇಲೆ ನಿಲ್ಲಬೇಕು, ಕೈ ತುಂಬಾ ಹಣ ಸಂಪಾದಿಸಬೇಕು ಅದಕ್ಕಾಗಿ ಸರಿಯಾದ ಪ್ರಾಮಾಣಿಕವಾದ ದಾರಿಯನ್ನು ಕಂಡುಕೊಳ್ಳಬೇಕು ಅಷ್ಟೇ. ಇಲ್ಲಿ ದುಡ್ಡು, ಜಾಗ, ದುಡಿಯಲು ಆಳು ಇವ್ಯಾವುದೂ ಮುಖ್ಯವಾಗುವುದಿಲ್ಲ. ಬದಲಿಗೆ ಮೊದಲಿಗೆ ಬೇಕಾಗಿರುವುದು ಅಂದುಕೊಂಡ ಕೆಲಸ ಸಾಧಿಸುವ ಛಲ.
ಹೌದು, ಈ ಯುವಕನ ಬಳಿ ಕೂಡಾ ಐಷಾರಾಮಿ ಕೆಫೆಯನ್ನು ಬಾಡಿಗೆಗೆ ಪಡೆಯಲು ಹಣವಿರಲಿಲ್ಲ. ಕೆಫೆಯಲ್ಲಿ ಒಂದಷ್ಟು ಮಂದಿಯನ್ನು ದುಡಿಸಿ ಸಂಬಳ ನೀಡುವಷ್ಟು ಸಿರಿತನವೂ ಇರಲಿಲ್ಲ. ಆದರೆ ತನ್ನದೇ ಬಿಸಿನೆಸ್ ಮಾಡಬೇಕು, ತನ್ನವರನ್ನು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎನ್ನುವ ಆಸೆ, ತುಡಿತ ಇತ್ತು. ಹಾಗಾಗಿ ತನ್ನ ಹೆಗಲ ಮೇಲೆ 15 ಕಿಲೋಗ್ರಾಂಗಳಷ್ಟು ತೂಕದ ಕೆಫೆಯನ್ನು ನಿರ್ಮಿಸಿದನು. ಈ ಯುವಕನಿಗೆ, ಕುದಿಯುವ ಥರ್ಮೋಸ್ನ ದೈಹಿಕ ತೂಕ ಕಷ್ಟ ಎನಿಸಲಿಲ್ಲ. ಜನ ಏನು ಹೇಳುತ್ತಾರೋ ಎನ್ನುವ ಮಾನಸಿಕ ಒತ್ತಡವೂ ಇರಲಿಲ್ಲ. ಬದಲಿಗೆ ಮನದಲ್ಲಿ ಇದ್ದದ್ದು ಒಂದೇ ತಾನೂ ಎಲ್ಲರಂತೆ ದುಡಿಯಬೇಕು, ಬದುಕು ಕಟ್ಟಿಕೊಳ್ಳಬೇಕು ಎನ್ನುವ ಮಹಾದಾಸೆ.

ಬಾಂಗ್ಲಾದೇಶದಾದ್ಯಂತ ಬೆಳೆಯುತ್ತಿರುವ ಪ್ರವೃತ್ತಿಯಾದ ಬ್ಯಾಕ್ಪ್ಯಾಕ್ ಕಾಫಿ ಮಾರಾಟಗಾರರ ವೀಡಿಯೊಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ. ಹಾಗೆಯೇ ಸುಮ್ಮನೆ ನೋಡಿದರೆ ಇದು ಒಂದು ಸುಂದರ ಇಂಟರ್ನೆಟ್ ವಿಡಿಯೋದಂತೆ ಮಾತ್ರ ಕಾಣಿಸಬಹುದು. ಆದರೆ ಇದರ ಆಳಕ್ಕೆ ಇಳಿದು ನೋಡಿದರೆ ಒಬ್ಬನ , ಬದುಕುಳಿಯುವಿಕೆಯ ಹೋರಾಟ, ಘನತೆ ಕಾಪಾಡಿಕೊಳ್ಳುವ ತವಕ ಮತ್ತು ನಿರ್ಭೀತ ಮನಸ್ಸಿನ ಕಥೆಯನ್ನು ಕಾಣಿಸುತ್ತದೆ.
ಇವರು ಕಠಿಣ ಪರಿಶ್ರಮದ ಮೂಲಕ ತಮ್ಮ ಕುಟುಂಬಗಳನ್ನು ಪೋಷಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಸಾಮಾನ್ಯ ಯುವಕರು. ತಮ್ಮ ಬದುಕು ಕಟ್ಟಿಕೊಳ್ಳಬೇಕು, ಕುಟುಂಬವನ್ನು ನೋಡಿಕೊಳ್ಳಬೇಕು ಎನ್ನುವ ಹಂಬಲದಿಂದ ನಿಯತ್ತಾಗಿ ದುಡಿಯುವವರು. ನಮ್ಮ ಸಮಾಜದಲ್ಲಿ, ಡೆಸ್ಕ್ ಕೆಲಸಗಳು ಮತ್ತು ಕಚೇರಿ ಕೆಲಸಗಳನ್ನು ಹೆಚ್ಚಾಗಿ ಗೌರವದಿಂದ ನೋಡಲಾಗುತ್ತದೆ. ಯಾರಾದರೂ ಕಚೇರಿಯಲ್ಲಿ ಕೆಲಸ ಮಾಡುತ್ತಿದಾರೆ ಎಂದಾಗ ಅವರಿಗೆ ಸಿಗುವ ಗೌರವವೇ ಬೇರೆ. ಅದೇ ಸ್ವಂತವಾಗಿ ದುಡಿಯುವ ಇಚ್ಛೆಯಿಂದ ಬೀದಿಗಳಲ್ಲಿ ಚಹಾ ಅಥವಾ ಕಾಫಿ ಮಾರಾಟ ಮಾಡುತ್ತಿದ್ದಾರೆ ಎಂದರೆ ಅವರನ್ನು ನಡೆಸಿಕೊಳ್ಳುವ ಪರಿಯೇ ಬೇರೆ. ಆದರೆ ಈ ಯುವಕರು ಇಂಥಹ ಮನಸ್ಥಿತಿಯಿಂದ, ಜನ ಏನು ಹೇಳುತ್ತಾರೋ ಎನ್ನುವ ಹಿಂಜರಿಕೆಯನ್ನು ಸಂಪೂರ್ಣವಾಗಿ ಮೆಟ್ಟಿ ನಿಂತಿದ್ದಾರೆ. ನಿಜ ಹೇಳಬೇಕೆಂದರೆ ಮಾತನಾಡಿಕೊಳ್ಳುವ ಆ ನಾಲ್ಕು ಜನರ ಬಗ್ಗೆ ಇವರಿಗೆ ಗೊಡವೆಯೇ ಇಲ್ಲ. ತಮ್ಮ ಕೆಲಸ ಮತ್ತು ಪ್ರಾಮಾಣಿಕತೆಯ ಬಗ್ಗೆ ಗೌರವವಿದೆ ಅಷ್ಟೆ.
ಒಳ್ಳೆತನಕ್ಕೆ ಗಡಿ ಇರಬಾರದು:
ಈ ಕಥೆ ಬಾಂಗ್ಲಾದೇಶದ ಬೀದಿಗಳಿಂದ ಬಂದಿರಲಿ ಅಥವಾ ಕರ್ನಾಟಕದ ಸಣ್ಣ ಹೋಟೆಲ್ನಿಂದ ಬಂದಿರಲಿ ಅದು ಮುಖ್ಯವಲ್ಲ.ಒಳ್ಳೆತನಕ್ಕೆ ಗಡಿ ಇರಲೇ ಬಾರದು. ಅದು ಪ್ರಾಮಾಣಿಕತೆ ಮತ್ತು ದೃಷ್ಟಿಕೋನವನ್ನು ಹೊಂದಿದ್ದರೆ ಸಾಕು, ಜಗತ್ತಿನಾದ್ಯಂತ ಜನರಿಗೆ ಕನೆಕ್ಟ್ ಆಗಿ ಬಿಡುತ್ತದೆ.
ಇವರ ಬಗ್ಗೆ ಒಂದು ಕ್ಷಣ ಯೋಚಿಸಿ:
ಜನದಟ್ಟಣೆಯ ಪ್ರದೇಶದಲ್ಲಿ ನಮಗೆ ಒಂದು ಲೋಟ ಕಾಫಿ ಇದ್ದಿದ್ದರೆ ಎಂದು ಅದೆಷ್ಟೋ ಸಲ ಅನ್ನಿಸುವುದುಂಟು. ಆ ಸಂದರ್ಭದಲ್ಲಿ ಎಲ್ಲಿಯೂ ಕೆಫೆ ಸಮೀಪದಲ್ಲಿ ಸಿಗುವುದಿಲ್ಲ. ಕಾಫಿ ಕುಡಿಯಲೇ ಬೇಕು ಎಂದಾದರೆ ಮಾರುಗಟ್ಟಲೆ ನಡೆಯಬೇಕು ಅಥವಾ ಬಂಡಿ ಏರಬೇಕು. ಆದರೆ ನಾವಿದ್ದಲ್ಲಿಗೆ ಇಡೀ ಕೆಫೆ ನೇರವಾಗಿ ಹೆಜ್ಜೆ ಹಾಕಿದರೆ ಹೇಗಿರುತ್ತದೆ. ಇಲ್ಲಿ ಆಗುತ್ತಿರುವುದು ಕೂಡಾ ಇದೇ. ನಾವಿದ್ದಲ್ಲಿಗೆ ೧೫ ಕಿಲೋ ತೂಕದ ಕೆಫೆ ಬರುತ್ತದೆ. ನಮಗೆ ಬೇಕಾದ ಕಾಫಿ ನೀಡಿ ನಮ್ಮ ಮೈ ಮನಸ್ಸನ್ನು ಬೆಚ್ಚಗಾಗಿಸುತ್ತದೆ. ಇದು ಹೈಪರ್-ಲೋಕಲ್ ವಿತರಣೆ ಮತ್ತು ಉತ್ಪನ್ನ-ಮಾರುಕಟ್ಟೆಗೆ ಶುದ್ಧ ರೂಪದಲ್ಲಿ ಹೊಂದಿಕೊಳ್ಳುತ್ತದೆ.
15-ಕಿಲೋ ಕಾಫಿ ಸೆಟಪ್ ಅನ್ನು ಬೆನ್ನಿನ ಮೇಲೆ ಹೊತ್ತುಕೊಂಡು ತಿರುಗಾಡುವಾಗ ಒಮ್ಮೆಗೆ ಇವರು ಅಸಾಮಾನ್ಯವಾಗಿ ಕಾಣಿಸಬಹುದು. ಇದರ ಬದಲು ಒಂದು ಪುಟ್ಟ ಅಂಗಡಿ ತೆರೆಯಬಹುದಿತ್ತು ಎಂದು ಅನ್ನಿಸಲೂ ಬಹುದು. ಆದರೆ ಸಾಮಾನ್ಯ ಟೀ ಸ್ಟಾಲ್ ಅನ್ನು ತೆರೆದಿದ್ದರೆ, ಹೆಚ್ಚಿನವರು ಅದನ್ನು ನಿರ್ಲಕ್ಷಿಸಿ ಮುಂದೆ ಸಾಗಿ ಬಿಡುತ್ತಿದ್ದರು. ಇದರ ಬದಲು ಸಂಪೂರ್ಣ ಕೆಫೆ ಸೆಟಪ್ ನಮ್ಮ ಕಾಲ ಬಳಿ ಬಂದು ನಿಂತರೆ ಖಂಡಿತವಾಗಿಯೂ ವಿಚಿತ್ರ ಅನ್ನಿಸದೆ ಇರದು.
ಮೊದ ಮೊದಲು ಈ ಪ್ರವೃತ್ತಿ ಕಂಡು ಜನ ನಕ್ಕಿದ್ದರು.ನಂತರ ಅವರೇ ಬೆರಗು ಗಣ್ಣಿನಿಂದ ನೋಡುವುದಕ್ಕೆ ಶುರು ಮಾಡಿದರು. ಇದಾದ ಬಳಿಕ ಮೂಡಿದ್ದೇ ಆ ಹುಡುಗರ ಬಗೆಗೆ ಗೌರವ. ವೃತ್ತಿಪರರಾಗಿ, ನಾವು ಸಾಮಾನ್ಯವಾಗಿ GTM ತಂತ್ರಗಳು ಮತ್ತು ಗ್ರಾಹಕ ಸ್ವಾಧೀನ ವೆಚ್ಚಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ ಈ ಯುವಕರ ಕಲ್ಪನೆಯ ಹಿಂದಿನ ಪ್ರಾಯೋಗಿಕ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಳ್ಳುವುದಾದರೆ...
ಮಾರಾಟದ ಬೆಲೆ: ಪ್ರತಿ ಕಪ್ಗೆ 20-₹30
ಅಂದಾಜು ವೆಚ್ಚ: ಸುಮಾರು 10 ಅಂಗಡಿ ಬಾಡಿಗೆ ಕೊಡಬೇಕಾಗಿಲ್ಲ, ವಿದ್ಯುತ್ ಬಿಲ್ ಇಲ್ಲವೇ ಇಲ್ಲ.
ದೈನಂದಿನ ಮಾರಾಟ: ಜನದಟ್ಟಣೆಯ ಪ್ರದೇಶಗಳಲ್ಲಿ 100-150 ಕಪ್ಗಳು ಎಂದಿಟ್ಟುಕೊಳ್ಳೋಣ.
ಅಂದಾಜು ಮಾಸಿಕ ಲಾಭ: 30,000-50,000
ಅನೇಕ ಆರಂಭಿಕ ಮಟ್ಟದ ಕಾರ್ಪೊರೇಟ್ ಉದ್ಯೋಗಗಳಿಗಿಂತ ಹೆಚ್ಚಿನ ನಿವ್ವಳ ಲಾಭವನ್ನು ಈ ಸಂಚಾರಿ ಕೆಫೆ ನೀಡುತ್ತದೆ. ಈ ತಂತ್ರವು ಆಶ್ಚರ್ಯಕರವಾಗಿ ಕಂಡರೂ ಬಹಳ ಸರಳವಾಗಿದೆ:
ನಮ್ಮಲ್ಲಿ ಅನೇಕರು ಇಂಥಹ ಆಲೋಚನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ವಿಚಿತ್ರವಾಗಿ ಕಾಣುತ್ತೇವೆ ಅಥವಾ ಯಾರು ನಮ್ಮ ಬಗ್ಗೆ ಏನು ಹೇಳುತ್ತಾರೆಯೋ, ಯಾವ ನಿರ್ಣಯಕ್ಕೆ ಬರುತ್ತಾರೆಯೋ ಎನ್ನುವ ಭಯದಿಂದ ಇಂತಹ ಉದ್ಯಮಕ್ಕೆ ಕೈ ಹಾಕುವುದೇ ಇಲ್ಲ. ನಿಜ ಹೇಳಬೇಕೆಂದರೆ ಬದುಕಿಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ರೀತಿಯ ಹೋರಾಟವನ್ನು ನಡೆಸುತ್ತಾನೆ. ಕೆಲವರು ಕಚೇರಿ ಕ್ಯಾಬಿನ್ ಒಳಗೆ ಕುಳಿತು ಒತ್ತಡದೊಂದಿಗೆ ಹೋರಾಡುತ್ತಿರುತ್ತಾರೆ. ಆದರೆ ಇದು ಹೊರ ಜಗತ್ತಿಗೆ ತಿಳಿಯುವುದಿಲ್ಲ ಅಷ್ಟೇ.
ಇನ್ನೊಬ್ಬರು 15 ಕಿಲೋ ತೂಕದ ಕೆಫೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಮಳೆ ಬಿಸಿಲೆನ್ನದೆ ಕಷ್ಟಪಡುತ್ತಾರೆ.ಗೌರವ ಸಂಪಾದಿಸುತ್ತಾರೆ. ತನಗೆ ಬೇಕಾದಂತೆ ದುಡಿಯುತ್ತಾರೆ. ತೀರಾ ಕಷ್ಟ, ಸಂಕಟ,ನೋವು ಎಂದಾದಾಗ ಬಿಡುವು ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ಮಾನಸಿಕ ಒತ್ತಡದಿಂದ ಮುಕ್ತಿ ಇದೆ. ಹಾಗಂತ ನಾವೆಲ್ಲರೂ ಬೀದಿಗಳಲ್ಲಿ ಕಾಫಿ ಮಾರಾಟ ಮಾಡುವ ಅಗತ್ಯವಿಲ್ಲ.
ನಮ್ಮ ಹೃದಯ ನಿಜವಾಗಿಯೂ ನಂಬುವ ವಿಷಯವನ್ನು ಪ್ರಯತ್ನಿಸಲು ಒಂದು ಪ್ರಾಮಾಣಿಕ ಅವಕಾಶ ನೀಡಿದರೆ ಸಾಕು.
ಪ್ರತಿ ಕೆಲಸದಲ್ಲಿಯೂ ಯಶಸ್ಸು ಅಥವಾ ವೈಫಲ್ಯ ಇದ್ದೇ ಇರುತ್ತದೆ. ಆದರೆ ಪ್ರಯತ್ನ ಬೇಕು, ಪ್ರಯತ್ನವೇ ಇಲ್ಲದೆ ಸೋಲಿಗೆ ಭಯ ಪಡಬಾರದು, ಅಥವಾ ಗೆಲುವಿನ ಕನಸು ಕಾಣಬಾರದು. ನಾವು ನಮ್ಮ ಕನಸನ್ನು ಬೆನ್ನತ್ತಲು ತೋರುವ ಧೈರ್ಯದೊಂದಿಗೆಯೇ ನಮ್ಮ ನಿಜವಾದ ಗೆಲುವುದು ಕೂಡಾ ರೂಪಿತವಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications